ಸಾರಾಂಶ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ಷಣ್ಮುಖಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಂಪ್ಲಿ: ಪರಿಶಿಷ್ಟ ಜಾತಿ ಹಾಗೂ ದಲಿತ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಭೂಮಿಯ 50, 53, 57 ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ಷಣ್ಮುಖಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಮಿತಿಯ ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಕೆ. ಮೆಹಬೂಬ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿಯೊಳಗಾಗಿ ಇತ್ಯರ್ಥಗೊಳಿಸಬೇಕು. ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಬಳ್ಳಾರಿ ತಾಲೂಕಿನ ಕುಡುತಿನಿ ವ್ಯಾಪ್ತಿಗೆ ಒಳಪಡುವ 7 ಹಳ್ಳಿಗಳ ರೈತರು, ಮೂರು ವರ್ಷಗಳ ಕಾಲ ಹೋರಾಟ ಮಾಡಿದರೂ ಸರ್ಕಾರವು ಯಾವುದೇ ಕ್ರಮಕೈಗೊಳ್ಳದೇ ಸುಮಾರು 12,000 ಎಕರೆ ಭೂಮಿಯನ್ನು ಹರ್ಷಮಿತ್ತಲ್ ಕಂಪನಿ, ಎನ್‌ಎಂಡಿಸಿ ಉತ್ತಾಂಗಲ್ವ ಕೈಗಾರಿಕೆಗಳ ಸ್ಥಾಪನೆಗಾಗಿ ವಶಪಡಿಸಿಕೊಂಡಿದ್ದು, ರೈತರಿಗೆ ನ್ಯಾಯಯುತವಾಗಿ ಭೂ ಪರಿಹಾರ ಕೊಡಬೇಕು. ನೊಂದ ಕುಟುಂಬಗಳಿಗೆ ಉದ್ಯೋಗ ಕೊಡಬೇಕು. ಕೂಡಲೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಪರಿಶಿಷ್ಟರ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಟ್ಟಣದ 23ನೇ ವಾರ್ಡ್ ಹುಲಿಗೆಮ್ಮ ಕ್ಯಾಂಪಿನಲ್ಲಿ ವಾಸಿಸುತ್ತಿರುವ ಎಸ್ಸಿ ಎಸ್ಟಿ, ಹಿಂದುಳಿದವರಿಗೆ ಆಶ್ರಯ ಯೋಜನಯಡಿ ನೀಡಿದ ಹಕ್ಕುಪತ್ರಗಳಿಗೆ ನಿವೇಶನ ವಿತರಿಸಬೇಕು. ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ, ಏಕ ಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿದರು.ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಫ್ರಾನ್ಸಿಸ್, ತಾಲೂಕು ಸಂಚಾಲಕ ಕಾರೇಕಲ್ ಕೃಷ್ಣ, ತಾಲೂಕು ಸಂಘಟನಾ ಸಂಚಾಲಕ ರಾಜೇಶ, ಪದಾಧಿಕಾರಿಗಳಾದ ಎನ್. ರುದ್ರಪ್ಪ, ವೆಂಕಟೇಶ ಬೆಳಗೋಡ, ಎನ್. ಗೋಪಿನಾಥ, ಸಿಂಧೋಳ್ಳು ವೆಂಕಟೇಶ, ಚಿನ್ನಾ, ವೆಂಕಿ, ಸಂದೀಪ್, ನಿತಿನ್ ಸೇರಿ ಇತರರಿದ್ದರು.