ಮೀಸಲಾತಿ ವಿರೋಧಿ ರಾಗಾ ಸಂಸದ ಸ್ಥಾನ ಅನರ್ಹಗೊಳಿಸಿ

| Published : Sep 15 2024, 01:54 AM IST

ಸಾರಾಂಶ

ಅಮೇರಿಕಾದ ಜಾರ್ಜ್ ಟೌನ್‌ ವಿಶ್ವವಿದ್ಯಾನಿಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ರದ್ದುಪಡಿಸುವುದಾಗಿ ಹೇಳಿಕೆ ನೀಡಿರುವುದು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

- ಮೀಸಲಾತಿ ವ್ಯವಸ್ಥೆ ರದ್ದುಪಡಿಸುವ ಕಾಂಗ್ರೆಸ್‌ ನಾಯಕನ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆಯಲ್ಲಿ ಮುಖಂಡರ ಆಗ್ರಹ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅಮೇರಿಕಾದ ಜಾರ್ಜ್ ಟೌನ್‌ ವಿಶ್ವವಿದ್ಯಾನಿಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ರದ್ದುಪಡಿಸುವುದಾಗಿ ಹೇಳಿಕೆ ನೀಡಿರುವುದು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕ, ಎಸ್‌ಸಿ- ಎಸ್‌ಟಿ- ಒಬಿಸಿ ಮೋರ್ಚಾದಿಂದ ಬಾಬಾ ಸಾಹೇಬ್‌ ಪುತ್ಥಳಿಗೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು. ಬಳಿಕ ಮೀಸಲಾತಿ ವಿರೋಧಿಗಳಾದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗುತ್ತಾ, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಕಚೇರಿ ಮುಖಾಂತರ ರಾಷ್ಟ್ರಪತಿ, ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಪಕ್ಷದ ಮುಖಂಡರು ಮಾತನಾಡಿ, ಅಮೇರಿಕಾದ ಜಾರ್ಜ್‌ಟೌನ್ ವಿವಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಈಚೆಗೆ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್‌ ಪಕ್ಷ, ರಾಹುಲ್ ಗಾಂಧಿ ಸದಾ ಪರಿಶಿಷ್ಟ ಜಾತಿ-ಪಂಗಡಗಳು, ಹಿಂದುಳಿದ ವರ್ಗಗಳ ವಿರೋಧಿ ನೀತಿ, ಧೋರಣೆ ಅನುಸರಿಸಿಕೊಂಡೇ ಬಂದಿದ್ದಾರೆ. ರಾ.ಗಾ. ಹೇಳಿಕೆಯಿಂದ ದಲಿತರಿಗೆ ತೀವ್ರ ನೋವಾಗಿದೆ. ತಕ್ಷಣವೇ ಅವರು ತಮ್ಮ ಹೇಳಿಕೆಗಾಗಿ ದೇಶದ ಪರಿಶಿಷ್ಟ ಜಾತಿ-ಪಂಗಡಗಳು, ಹಿಂದುಳಿದ ವರ್ಗಗಳ ಕ್ಷಮೆ ಕೇಳಬೇಕು. ಅಲ್ಲದೇ, ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ರಾಷ್ಟ್ರಪತಿ ಅವರು ತಕ್ಷಣ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ಎಂಬುದು ದಲಿತರ ಹಕ್ಕು. ಅದನ್ನು ಯಾರೂ ಕೂಡ ಕಸಿಯಲು ಬಿಜೆಪಿ ಬಿಡುವುದಿಲ್ಲ. 7 ದಶಕದಿಂದಲೂ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸವನ್ನೇ ಕಾಂಗ್ರೆಸ್ ಮಾಡಿದೆ. ದಲಿತರ ಶ್ರೇಯೋಭಿವೃದ್ಧಿಗಾಗಿ ಸಮಗ್ರ ನೀತಿ ರೂಪಿಸುವಲ್ಲೂ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ದಲಿತರು, ಶೋಷಿತರು, ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಪಕ್ಷವು ಕೇವಲ ಮತ ಬ್ಯಾಂಕ್ ರೂಪದಲ್ಲಿ ಕಾಣುತ್ತಿದೆ. ಇಂತಹ ಪಕ್ಷದ ನಾಯರ ರಾಹುಲ್ ಗಾಂಧಿ ಮೀಸಲಾತಿ ಕಸಿಯುವ ಮಾತುಗಳನ್ನಾಡಿದ್ದಾರೆ ಎಂದು ದೂರಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರನ್ನೇ 2 ಸಲ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬರಿಗೆ ಎಲ್ಲಿಲ್ಲದ ಅವಮಾನ ಮಾಡಿತ್ತು. ಇದೀಗ ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್‌ ವಿಚಾರಗಳಿಗೆ ತಿಲಾಂಜಲಿ ಇಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಹ ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ. ಕಾಕಾ ಕಾಲೇಲ್ಕರ್‌, ಡಿ.ಸಿ.ಮಂಡಲ್ ಸಮಿತಿ ವರದಿಗಳನ್ನು ಕಸದ ತೊಟ್ಟಿಗೆ ಎಸೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರಗಳು ಮಾಡಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಬಳಸಬೇಕಾದ ₹25 ಸಾವಿರ ಕೋಟಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದೆ. ಇದು ಸಹ ಪರಿಶಿಷ್ಟರಿಗೆ ಮಾಡಿದರ ಘೋರ ಅನ್ಯಾಯ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣವನ್ನು ಬಳ್ಳಾರಿ ಚುನಾವಣೆಗೆ ಕಾಂಗ್ರೆಸ್‌ ಸಚಿವರು, ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಎಸ್‌ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಾಗಿದ್ದ ನಿಗಮದ ನೂರಾರು ಕೋಟಿ ಹಗರಣದ ನಿಷ್ಪಕ್ಷಪಾತ ತನಿಖೆಯಾಗಬೇಕು. ಸಚಿವರು, ಶಾಸಕರು ಸೇರಿದಂತೆ ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.

ಮಾಜಿ ಶಾಸಕರಾದ ಎಸ್‌.ವಿ.ರಾಮಚಂದ್ರ, ಎಚ್‌.ಪಿ.ರಾಜೇಶ, ಎಂ.ಬಸವರಾಜ ನಾಯ್ಕ, ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಕೆ.ಎಸ್. ಕೃಷ್ಣಕುಮಾರ, ಮಂಜಾ ನಾಯ್ಕ, ಅಣಬೇರು ಜೀವನಮೂರ್ತಿ, ಬಿ.ಎಂ. ಸತೀಶ, ಜಿ.ಎಸ್‌.ಶ್ಯಾಮ್ ಮಾಯಕೊಂಡ, ಟಿಂಕರ್ ಮಂಜಣ್ಣ, ಅಣಜಿ ಅಣ್ಣೇಶ್, ದೊಡ್ಡೇಶ, ಎಸ್.ಟಿ.ವೀರೇಶ, ಜಿ.ವಿ. ಗಂಗಾಧರ, ಸುರೇಶ, ದೊಡ್ಡೇಶ, ರಮೇಶ, ಭಾಗ್ಯ ಪಿಸಾಳೆ, ಕಾಂತರಾಜ, ಕೆ.ಟಿ.ಜೆ. ನಗರ ಆನಂದ, ಕೆಟಿಜೆ ನಗರ ಲೋಕೇಶ, ನಿಂಗರಾಜ ರೆಡ್ಡಿ, ನವೀನ, ಶಿವನಗೌಡ ಪಾಟೀಲ ಇತರರು ಇದ್ದರು.

- - - (-ಫೋಟೋ ಇದೆ)