ಸಾರಾಂಶ
ಜಿಲ್ಲಾಧಿಕಾರಿ ನಗರಸಂಚಾರ ವೇಳೆ ನೀಡಿದ ಸೂಚನೆಗಳು ಪಾಲನೆಯಾಗಿಲ್ಲ
ಕನ್ನಡಪ್ರಭ ವಾರ್ತೆ ಕೋಲಾರಫೆ.೬ರಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾ ಕೇಂದ್ರದಲ್ಲಿ ನಗರಸಂಚಾರ ಮಾಡುವ ಸಂದರ್ಭದಲ್ಲಿ ನಗರದ ಟೇಕಲ್ ರಸ್ತೆಯಲ್ಲಿ ಅನಧೀಕೃತ ನಿರ್ಮಾಣವಾಗಿದ್ದ ನಂದಿನಿ ಬೂತ್‌ಅನ್ನು ತೆರವುಗೊಳಿಸುವಂತೆ ನಗರಸಭೆ ಆಯುಕ್ತ ಪ್ರಸಾದ್‌ರಿಗೆ ಸೂಚಿಸಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಅನಧಿಕೃತ ಹಾಲಿನ ಕೇಂದ್ರ:ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಕಸದ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರ ದೂರುಗಳ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ ನಗರಸಂಚಾರ ಸಂದರ್ಭದಲ್ಲಿ ನಗರದ ಟೇಕಲ್ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಉದ್ಯಾನವನದ ಮುಂದೆ ಅನಧಿಕೃತವಾಗಿ ತಲೆಯೆತ್ತಿರುವ ಅಂಗಡಿಯ ವಿಷಯ ಕುರಿತು ಮಾಧ್ಯಮದವರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ನಗರಸಭೆ ಆಯುಕ್ತ ಪ್ರಸಾದ್‌ರಿಗೆ ಕೂಡಲೇ ಅಂಗಡಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಅಂಗಡಿ ತೆರವುಗೊಳಿಸಲು ಮುಂದಾಗಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಪುಟ್‌ಪಾತ್ ರಸ್ತೆಗಳನ್ನು ನಿರ್ಮಿಸಿದ್ದಾರೆ, ಆದರೆ ಅಂಗಡಿ ಮಾಲೀಕರು ಪುಟ್‌ಪಾತ್ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸಮಂಜಸವಲ್ಲವೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಂಗಡಿ ಮಾಲೀಕರಿಗೆ ಎಚ್ಚರಿಸಿದರೂ ಸಹ ಅದನ್ನು ಪಾಲಿಸುತ್ತಿಲ್ಲ.
ಫುಟ್‌ಪಾತ್ ಒತ್ತುವರಿ ತೆರವಿಲ್ಲ:ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಪುಟ್‌ಬಾತ್ ರಸ್ತೆಗಳನ್ನು ಖಾಸಗಿ ಅಂಗಡಿಯವರು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾರೆ, ಆದರೆ ನಗರಸಭೆಯ ಅಧಿಕಾರಿಗಳಾಗಲಿ ಅಥವಾ ನಗರಸಭಾ ಸದಸ್ಯರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಕೂಡಲೇ ಪುಟ್‌ಪಾತ್ ಒತ್ತುವರಿ ತೆರವು ಮಾಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಇದುವರೆಗೂ ಪುಟ್‌ಪಾತ್ ರಸ್ತೆ ತೆರವು ಮಾಡಿಸಿಲ್ಲ. ಹಾಗಾದರೆ ಜಿಲ್ಲಾಧಿಕಾರಿಗಳ ಸೂಚನೆಗೆ ಯಾವುದೇ ಬೆಲೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.------