ಮಾಧ್ಯಮ ಅಕಾಡೆಮಿ ಪ್ರಶಸ್ತಿ ಆಯ್ಕೆಯಲ್ಲಿ ಜಿಲ್ಲೆಯ ಕಡೆಗಣನೆ

| Published : Jan 04 2025, 12:32 AM IST

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಆಯ್ಕೆಯಲ್ಲಿ ಜಿಲ್ಲೆಯ ಕಡೆಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಪತ್ರಕರ್ತರನ್ನು ಆಯ್ಕೆ ಮಾಡದೆ ಕಡೆಗಣಿಸಲಾಗಿದೆ. ಆದ್ದರಿಂದ ಆಯ್ಕೆ ಪಟ್ಟಿಯನ್ನು ತಡೆಹಿಡಿಯಬೇಕು ಎಂದು ಕೋರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ೨೦೧೯ ರಿಂದ ೨೦೨೪ ರವರೆಗೆ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಆಯ್ಕೆಯಲ್ಲಿ ನಿರಂತರವಾಗಿ ಜಿಲ್ಲೆಯ ಪತ್ರಕರ್ತರನ್ನು ಕಡೆಗಣಿಸಲಾಗಿದೆ ಎಂದು ಮನವರಿಕೆ ಮಾಡಿದರು. ಚಾಮರಾಜನಗರ ಜಿಲ್ಲೆಯಾಗಿ ೨೮ ವರ್ಷವಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂವರಿಗೆ ಮಾತ್ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಜಿಲ್ಲೆಯ ಪತ್ರಕರ್ತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ಬಾರಿಯೂ ಅದು ಮುಂದುವರಿದಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಸಂಬಂಧ ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಮ್ಮ ಗಮನಕ್ಕೆ ತರಲಾಗಿದೆ. ಆದರೂ ಈ ಬಾರಿಯೂ ಜಿಲ್ಲೆಯ ಪತ್ರಕರ್ತರನ್ನು ಕಡೆಗಣಿಸಿರುವುದು ಬೇಸರದ ಸಂಗತಿ. ಈಗಾಗಲೇ ಪ್ರಕಟಿಸಿರುವ ಪಟ್ಟಿಯನ್ನು ತಡೆಹಿಡಿಯುವ ಮೂಲಕ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಕೋರಿದ್ದಾರೆ. ಅಕಾಡೆಮಿಯು ಜಿಲ್ಲೆಯನ್ನು ಕಡೆಗಣಿಸುತ್ತ ಹೋಗುವುದು ಸರಿಯಲ್ಲ. ಸಣ್ಣ ಪುಟ್ಟ ಜಿಲ್ಲೆಗಳ ಪತ್ರಕರ್ತರನ್ನು ಪ್ರಶಸ್ತಿಯಿಂದ ವಂಚಿಸುವುದು ಸೂಕ್ತವಲ್ಲ. ಜಿಲ್ಲೆಗೆ ಒಬ್ಬ ಪತ್ರಕರ್ತರಿಗಾದರೂ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರಶಸ್ತಿಗೆ ಜಿಲ್ಲೆಯ ಪತ್ರಕರ್ತರನ್ನು ಕಡೆಗಣಿಸಿರುವುದು ಸರಿಯಲ್ಲ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರೊಡನೆ ಮಾತನಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ಪದಾಧಿಕಾರಿಗಳಾದ ಎ.ಡಿ.ಸಿಲ್ವಾ, ಆರ್.ಎನ್. ಸಿದ್ದಲಿಂಗಸ್ವಾಮಿ, ಮಹೇಂದ್ರ, ರಾಜೇಂದ್ರ, ಗಂಗಾಧರ್, ಬಿಳಿಗಿರಿ ಶ್ರೀನಿವಾಸ್, ಲಿಂಗಪ್ಪ, ಬಾಲಚಂದ್ರ, ಹರವೆ ಮಹೇಶ್, ಮಂಜು ಇತರರಿದ್ದರು.