ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ತಮ್ಮ ಅಭೂತಪೂರ್ವ ಶಿಲ್ಪಕಲಾಕೃತಿಗಳ ರಚಿಸಿದ ಅಮರಶಿಲ್ಪಿ ಜಕಣಾಚಾರಿ ಭಾರತದ ವಾಸ್ತುಶಿಲ್ಪವನ್ನು ವಿಶ್ವದೆಲ್ಲೆಡೆ ಅಚ್ಚಳಿಯದಂತೆ ಮಾಡಿದ್ದಾರೆ. ಆದರೆ ಅವರು ಪ್ರತಿನಿಧಿಸಿದ ವಿಶ್ವಕರ್ಮ ಸಮಾಜವನ್ನು ದೇಶದ ರಾಜಕೀಯ ವ್ಯವಸ್ಥೆ ಕಡೆಗಣಿಸುತ್ತಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ವಿಠ್ಠಲಾಚಾರ ಆರೋಪಿಸಿದರು.ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ವಿಶ್ವಕರ್ಮ ಸಮಾಜ ಸಹಯೋಗದೊಂದಿಗೆ ಆಯೋಜಿಸಿದ್ದ ‘ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ’ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ದೇವಾಲಯಗಳನ್ನು ನೋಡಿ ಮೆಚ್ಚುಗೆ ಸೂಚಿಸದಿರುವ ವ್ಯಕ್ತಿಗಳಿಲ್ಲ. ಅವರ ಕಲಾಕೃತಿಗಳನ್ನು ಮೆಲುಕು ಹಾಕದಿರುವ ದೇಶವಿಲ್ಲ, ಅದರಲ್ಲೂ ವಿದೇಶಿ ಪ್ರವಾಸಿಗರಂತೂ ಬೇಲೂರು, ಹಳೇಬೀಡು ಸೇರಿದಂತೆ ಇತರ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಕೆತ್ತನೆಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಮ್ಮ ವಿಶ್ವಕರ್ಮ ಸಮಾಜದ ಬಗ್ಗೆ ಸರ್ಕಾರಗಳಿಗೆ ಅಸಡ್ಡೆ ಏಕೆ ಎಂದು ಪ್ರಶ್ನಿಸಿದರು.ಅಮರಶಿಲ್ಪಿ ಜಕಣಾಚಾರಿ ವಾಸ್ತುಶಿಲ್ಪಗಳು ವಿಶ್ವದ 8 ಅದ್ಭುತವಾಗಬೇಕಾಗಿತ್ತು. ಎಲ್ಲ ಅದ್ಬುತಗಳನ್ನು ಮೀರಿಸುವಂತಹ ಶಿಲ್ಪಕಲೆ ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಗಳಲ್ಲಿ ಈಗಲೂ ಕಾಣಸಿಗುತ್ತವೆ. ಆದರೆ ವಾಸ್ತವ ಅಂಶ ಮುಚ್ಚಿಟ್ಟು ಆತನ ಕೆತ್ತನೆಗಳು ಬೆಳಕಿಗೆ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ. ಅಂದಿನಿಂದಲೇ ನಮ್ಮ ವಿಶ್ವಕರ್ಮ ಸಮಾಜವನ್ನು ಹತ್ತಿಕ್ಕುತ್ತಾ ಬರಲಾಗುತ್ತಿದೆ. ಅಲ್ಪಸಂಖ್ಯಾತ ಸಮಾಜವೆಂಬ ಒಂದೇ ಕಾರಣಕ್ಕಾಗಿ ವಿಶ್ವಕರ್ಮ ಸಮಾಜದ ಧ್ವನಿ ಅಡಗಿಸುತ್ತಿರುವ ರಾಜಕೀಯ ಶಕ್ತಿಗಳಿಗೆ ನಮ್ಮದೊಂದು ಧಿಕ್ಕಾರವಿರಲಿ ಎಂದರು.
ಪುರಸಭೆ ಸದಸ್ಯೆ ಕಲಾವತಿ ಬಡಿಗೇರ ಮಾತನಾಡಿ, ಸುಂದರ ಕಲಾಕೃತಿಗಳಿಂದಲೇ ಭಾರತವನ್ನು ಮೆರೆಸಿದವರ ಮಕ್ಕಳು ಇಂದು ಉದ್ಯೋಗವಿಲ್ಲದೇ ಕುಟುಂಬ ಸಮೇತ ಬೀದಿಗೆ ಬಂದಿದ್ದಾರೆ. ಪರಿಸರ ಉಳಿಸುವ ನೆಪದಲ್ಲಿ ಅರಣ್ಯ ಇಲಾಖೆಯ ಬಿಗಿಯಾದ ಕಾನೂನುಗಳಿಂದ ಕೆತ್ತನೆ ಕೆಲಸಗಳು ಸ್ಥಗಿತಗೊಂಡಿವೆ. ಕಟ್ಟಿಗೆ ಉಪಯೋಗವಾಗುತ್ತಿದ್ದ ಜಾಗವನ್ನು ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ಆವರಿಸಿವೆ. ಇನ್ನೂ ಕೃಷಿಯಲ್ಲಿ ಅತಿಯಾದ ಯಾಂತ್ರೀಕರಣದಿಂದ ಸದಾಕಾಲ ನಮ್ಮ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಕೃಷಿಕರೂ ಸಹ ನಮ್ಮನ್ನು ತಿರಸ್ಕರಿಸುತ್ತಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಈ ವಿಷಯ ಗೊತ್ತಿದ್ದರೂ ನಮ್ಮ ಸಮಾಜದತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಾವ ಪುರುಷಾರ್ಥಕ್ಕೆ ಅಮರಶಿಲ್ಪಿ ಜಕಣಾಚಾರಿ ಸ್ಮರಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಾಧ್ಯಕ್ಷ ಜಕಣಾಚಾರಿ ಬಡಿಗೇರ್ ಮಾತನಾಡಿ, ಸಂಘಟನೆ ಕೊರತೆಯಿಂದ ವಿಶ್ವಕರ್ಮ ಸಮಾಜದ ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಆದರೆ ಬಹುಸಂಖ್ಯಾತ ಸಮಾಜ ಕೇಳುವ ಮುನ್ನವೇ ಅವರ ಬೇಡಿಕೆಗಳು ಈಡೇರಲಿವೆ. ಬಹುತೇಕ ಸಮುದಾಯಗಳು ತಮ್ಮದೇ ಸಮುದಾಯ ಭವನ ಹೊಂದಿವೆ. ಆದರೆ ಇಂದಿಗೂ ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನವಿಲ್ಲ ಕೂಡಲೇ ಎಲ್ಲರಂತೆ ನಮಗೂ ಸಮುದಾಯ ಭವನ ನಿರ್ಮಿಸಿಕೊಡುವಂತೆ ಆಗ್ರಹಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಎಸ್.ಡಿ. ಬಡಿಗೇರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪುರಸಭೆ ಸದಸ್ಯೆ ಸರೋಜಾ ಉಳ್ಳಾಗಡ್ಡಿ, ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಶಿಶು ಅಭಿವೃದ್ಧಿ ಅಧಿಕಾರಿ ವೈ.ಟಿ. ಪೂಜಾರ, ಸಮಾಜದ ಮುಖಂಡರಾದ, ಮಾಲತೇಶ ಬಡಿಗೇರ, ಮೌನೇಶ ಬಡಿಗೇರ, ಶಿವಾನಂದ ಬಡಿಗೇರ, ಮೌನೇಶ ಕಮ್ಮಾರ, ನಾಗರಾಜ ಬಡಿಗೇರ, ಶೇಷಣ್ಣ ಕಮ್ಮಾರ ಹಾಗೂ ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.