ಕಾಣಿಕೆ ಹಣ ಎಣಿಕೆಗೆ ಅಡ್ಡಿ: ಬಂಧನ, ಬಿಡುಗಡೆ

| Published : Jan 18 2024, 02:01 AM IST

ಸಾರಾಂಶ

ಹಿಂದೂ ಹಾಗೂ ಮುಸ್ಲಿಮರ ಕ್ಷೇತ್ರವಾಗಿ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಹಣಗೆರೆಕಟ್ಟೆ ಕ್ಷೇತ್ರದಲ್ಲಿ ಸಂಗ್ರಹವಾಗುವ ಹಣವನ್ನು ಕೊಂಡೊಯ್ಯುವ ಮುಜರಾಯಿ ಇಲಾಖೆ ಭಕ್ತಾದಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನೇ ಕಲ್ಪಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಬುಧವಾರ ಹುಂಡಿಯಲ್ಲಿನ ಕಾಣಿಕೆ ಹಣ ಎಣಿಕೆಗೆ ಅಡ್ಡಿಪಡಿಸಿದರು. ಈ ಹಿನ್ನೆಲೆ ಕೆಲ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಸ್ವಲ್ಪ ಹೊತ್ತಿನಲ್ಲಿ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದಲ್ಲಿ ಸಂಗ್ರಹವಾಗುವ ಹಣವನ್ನು ಕೊಂಡೊಯ್ಯುವ ಮುಜರಾಯಿ ಇಲಾಖೆ ಭಕ್ತಾದಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನೇ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಬುಧವಾರ ಹುಂಡಿಯಲ್ಲಿನ ಕಾಣಿಕೆ ಹಣ ಎಣಿಕೆಗೆ ಅಡ್ಡಿಪಡಿಸಿದರು. ಈ ಹಿನ್ನೆಲೆ ಕೆಲ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಸ್ವಲ್ಪ ಹೊತ್ತಿನಲ್ಲಿ ಬಿಡುಗಡೆ ಮಾಡಿದರು.

ಪ್ರತಿಭಟನಾಕಾರರು ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಆದಾಯ ತರುವ ಈ ಧಾರ್ಮಿಕ ಕೇಂದ್ರ ಇದಾಗಿದೆ. ಆದರೆ ಇಲ್ಲಿ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇಲ್ಲ. ವಾಹನ ನಿಲುಗಡೆಗೂ ವ್ಯವಸ್ಥೆ ಇಲ್ಲ. ನಾಡಿನಾದ್ಯಂತ ಆಗಮಿಸುವ ಭಕ್ತಾದಿಗಳು ಹಿಡಿಶಾಪ ಹಾಕುವಂತಾಗಿದೆ. ಈ ಧಾರ್ಮಿಕ ಕೇಂದ್ರದ ಬಗ್ಗೆ ಜಿಲ್ಲಾಡಳಿತಕ್ಕೆ ಯಾಕೆ ಇಷ್ಟು ಅವಗಣನೆ ಎಂದೂ ಪ್ರಶ್ನಿಸಿದರು.

ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಸ್ಥಳೀಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದ ಕಾರಣ ಇದರಿಂದ ಸ್ಥಳೀಯ ರೈತರಿಗೆ ಆರ್ಥಿಕ ನೆರವು ದೊರೆಯುತ್ತಿತ್ತು. ಈ ಬ್ಯಾಂಕಿನಲ್ಲಿದ್ದ ₹7.40 ಕೋಟಿಯನ್ನು ತೆಗೆದು, ಹಣವನ್ನು ಬೇರೆ ಕಡೆಗೆ ವರ್ಗಾಯಿಸಲು ಸಿದ್ಧತೆ ನಡೆದಿದೆ. ಇದಕ್ಕೆ ಅನುಕೂಲ ಆಗುವಂತೆ ಎಸ್‍ಬಿ ಖಾತೆಗೆ ಹಣ ವರ್ಗಾಯಿಸಲಾಗಿದೆ. ಇದರಿಂದ ಸ್ಥಳೀಯರು ಆರ್ಥಿಕ ನೆರವಿನಿಂದ ವಂಚಿತರಾಗುತ್ತಾರೆ ಎಂದೂ ಪ್ರತಿಭಟನಾಕಾರರು ಆರೋಪಿಸಿದರು.

ಹುಂಡಿ ಎಣಿಕೆ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಈ ಮೊದಲು ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಬ್ಯಾಂಕಿನವರೇ ಬಂದು ಎಣಿಕೆ ಮಾಡಿ ಕೊಂಡೊಯ್ಯುತ್ತಿದ್ದರು. ಈ ಬಾರಿ ಯಾಕೆ ಬದಲಾವಣೆ ಮಾಡಲಾಗಿದೆ? ಈ ಕ್ಷೇತ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವವನ್ನು ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ವಹಿಸಿದ್ದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಕನ್ನಂಗಿ ಗ್ರಾಪಂ ಅಧ್ಯಕ್ಷೆ ಸುಪ್ರೀತಾ, ಹಣಗೆರೆ ಗ್ರಾಪಂ ಉಪಾಧ್ಯಕ್ಷೆ ಸರೋಜಮ್ಮ, ಮಾಜಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಹೊನಾಸ್‍ಗದ್ದೆ ಮಂಜುನಾಥ್, ತುಳಸಿದಾಸ್, ಕೆ.ಅಶೋಕ್ ಪಾಲ್ಗೊಂಡಿದ್ದರು. ತಹಸಿಲ್ದಾರ್ ಜಕ್ಕನಗೌಡರ್ ಇದ್ದರು.

- - - -16ಟಿಟಿಎಚ್01:

ಪ್ರತಿಭಟನೆಯಲ್ಲಿ ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು.