ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡುವ ಉಚಿತ ಊಟಕ್ಕೆ ಅಡ್ಡಿ

| Published : Oct 04 2024, 01:03 AM IST

ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡುವ ಉಚಿತ ಊಟಕ್ಕೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಊಟ ನೀಡಲೆಂದು ತಯಾರಿಸಿ ತಂದಿದ್ದ ಊಟವನ್ನು ಕಾಲೇಜಿನ ಗೇಟಿನ ಹೊರಗಡೆಯಿಂದಲೇ ಕೆಲವೆ ಕೆಲವು ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಲಾಯಿತು. ಆದರೆ ಈ ಗೊಂದಲದಿಂದ ಅದೆಷ್ಟೊ ವಿದ್ಯಾರ್ಥಿಗಳು ಊಟ ಮಾಡುವ ಮನಸ್ಸಿದ್ದರೂ ಹಾಗೆಯೇ ಹೊರಟು ಹೋದರು. ಸುಮಾರು ಆರುನೂರು ವಿದ್ಯಾರ್ಥಿಗಳಿಗೆ ತಯಾರಿಸಿ ತಂದಿದ್ದ ಊಟದಲ್ಲಿ ಉಳಿದ ಊಟವನ್ನು ಅನಾಥ ಆಶ್ರಮಕ್ಕೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಾದ್ಯಂತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಸಂದೀಪ್.ಬಿ.ರೆಡ್ಡಿ ಇಂದು ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನದ ಬಿಸಿಯೂಟ ನೀಡಲು ಕಳೆದ 20 ದಿನಗಳ ಹಿಂದೆಯೇ ಘೋಷಿಸಿದ್ದರು. ಗುರುವಾರ ನವರಾತ್ರಿ ಪ್ರಾರಂಭ ಇಂದಿನಿಂದ ಉಚಿತ ಊಟ ನೀಡುವ ಪುಣ್ಯ ಕಾರ್ಯ ಮಾಡೋಣ ಎಂದು ಊಟ ತಯಾರಿಸಿ ಕಾಲೇಜಿಗೆ ತಂದಿದ್ದ ವಾಹನಗಳನ್ನು ಕಾಲೇಜು ಒಳಗಡೆ ಬಿಡದೆ ತಡೆದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸಂದೀಪ್ ಬಿ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿ, ಪ್ರಾಂಶುಪಾಲರ ಮೇಲೆ ಒತ್ತಡ ಹಾಕಿದ್ದ ಶಾಸಕರ ಮೇಲೆ ಬೇಸರ ವ್ಯಕ್ತಪಡಿಸಿದರು.

ಊಟ ನೀಡಲು ಬಂದಿದ್ದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಉಚಿತ ಊಟ ಹಂಚಿಕೆ ತಡೆ ಮಾಡಿದ್ದು ಏಕೆ ಎಂದು ಪ್ರಾಂಶುಪಾಲ ಚಂದ್ರಯ್ಯನವರನ್ನ ಪ್ರಶ್ನಿಸಿದರೆ, ಊಟ ನೀಡಲು ಅಭ್ಯಂತರವಿಲ್ಲ. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರದೀಪ್ ಈಶ್ವರ್ ಹಾಗೂ ಕಮಿಷನರ್ ಅನುಮತಿ ಪಡೆಯದೆ ಕಾಲೇಜು ಆವರಣದಲ್ಲಿ ಅನುಮತಿ ಕೊಡಲು ಸಾದ್ಯವಿಲ್ಲ. ಕಳೆದ ತಿಂಗಳು ಒಂದು ಸಮಾರಂಭಕ್ಕೆ ಬಂದಿದ್ದ ಸಂದೀಪರೆಡ್ಡಿಗೆ ವಿದ್ಯಾರ್ಥಿಗಳು ಊಟ ನೀಡುವಂತೆ ಕೇಳಿದ್ದು ನಿಜ. ಆದರೆ ನಾವು ಕೆಲವು ಕಾರ್ಯನಿಮಿತ್ತ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಲಿ, ಕಮಿಷನರ್ ರವರನ್ನಾಗಾಲಿ ಇನ್ನೂ ಕೇಳಿರಲಿಲ್ಲ, ಅವರು ಅನುಮತಿ ನೀಡದೆ ನಾನು ಒಪ್ಪಿಗೆ ಕೊಡಲು ಆಗುವುದಿಲ್ಲ ಎಂದರು.

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ. ರೆಡ್ಡಿ ಮಾತನಾಡಿ, ಇದೊಂದು ಪುಣ್ಯದ ಕೆಲಸ. ಹಸಿದ ವಿದ್ಯಾರ್ಥಿಗಳಿಗೆ ಊಟ ಕೊಟ್ಟು ಓದಿಗೆ ಪ್ರೋತ್ಸಾಹ ನೀಡು ಕೆಲಸ ಇದಾಗಿತ್ತು. ನಾನಾಗಿ ಊಟ ಕೊಡಬೇಕೆಂದು ಬಂದಿಲ್ಲ, ಈ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಊಟ ನೀಡುವಂತೆ ಮನವಿ ಮಾಡಿದ್ದರಿಂದ ಊಟ ನೀಡಲು ಮುಂದಾಗಿದ್ದೆ. ಅದಕ್ಕೆ ಕಾಲೇಜು ಆವರಣದಲ್ಲಿ ಕಿಚನ್ ನಿರ್ಮಾಣಕ್ಕೂ ತಯಾರಿ ನಡೆದಿತ್ತು, ಆದರೆ ಯಾಕೋ, ಎನೋ, ಯಾರು ಒತ್ತಡ ಹಾಕಿದರೋ ಗೊತ್ತಿಲ್ಲ. ಕೊನೆ ಕ್ಷಣದಲ್ಲಿ ಪ್ರಾಂಶುಪಾಲರ ಉತ್ಸಾಹ ಕಡಿಮೆಯಾಗಿತ್ತು. ಕೊನೆಗೆ ಊಟ ಬೇರೆ ಕಡೆಯಿಂದ ತಯಾರಿಸಿ ತಂದು ಹಂಚುವುದೆಂದು ತೀರ್ಮಾನಿಸಿ, ಇಂದು ನವರಾತ್ರಿ ಪ್ರಾರಂಭ ಒಳ್ಳೆ ದಿನ ಎಂದು ಊಟ ಕೊಡಲು ಬಂದರೆ ಕಾಲೇಜ್ ಗೇಟ್ ಬಂದ್ ಮಾಡಿ ವಿದ್ಯಾರ್ಥಿಗಳನ್ನು ಸಮಯಕ್ಕೆ ಮೊದಲೇ ತರಗತಿ ಮುಗಿಸಿ ಮನೆಗೆ ಕಳುಹಿಸಿದ್ದಾರೆ. ಇದು ರಾಜಕೀಯ ದುರುದ್ದೇಶವಾಗಿದೆ. ಹಸಿದ ಮಕ್ಕಳಿಗೆ ಊಟ ಕೊಡೋಕೆ ಬಂದರೆ ಅದರಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳುವ ಇವರ ಸಂಕುಚಿತ ಬುದ್ದಿ ಮಕ್ಕಳ ಹಸಿವಿನ ಪಾಪ ಅವರನ್ನು ಬಿಡೋದಿಲ್ಲ ಎಂದು ಆಕ್ರೋಶ ಹೊರಗಾಕಿದರು. ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಮಾತನಾಡಿ, ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ, ಗುಡಿಬಂಡೆ, ಮಂಚೇನಹಳ್ಳಿ, ಬೆಂಗಳೂರು ಗ್ರಾಮಾಂತರದ ವೆಂಕಟಗಿರಿಕೋಟೆ, ಆವತಿ, ವಿಜಯಪುರ ಸೇರಿದಂತೆ ದೂರದ ಹಳ್ಳಿಗಳಿಂದ ಬೆಳಗ್ಗೆ ಟಿಪಿನ್ ಮಾಡದೆ ಕಾಲೇಜಿಗೆ ಬರುವ ರೈತರ ಕೂಲಿ ಕಾರ್ಮಿಕರ ಮಕ್ಕಳು ಇದ್ದಾರೆ. ಅಂತಹ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಊಟ ಕೊಟ್ಟು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡೋ ಪುಣ್ಯದ ಕೆಲಸ ಮಾಡಲು ಹೊರಟಿದ್ದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿಯವರಿಗೆ ಅವಕಾಶ ಕೊಡಬೇಕಿತ್ತು. ಇದಕ್ಕೆ ಯಾರೇ ಅಡ್ಡಪಡಿಸಿದರೂ ಅದರಲ್ಲಿ ದುರುದ್ದೇಶ ತುಂಬಿದೆ. ಹಸಿದ ಮಕ್ಕಳ ಅನ್ನ ಕಿತ್ತುಕೊಂಡು ಪಾಪ ಮಾಡಿದಂತಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದರು.

ವಿದ್ಯಾರ್ಥಿಗಳಿಗೆ ತಯಾರಿಸಿದ್ದ ಊಟ ಅನಾಥಾಶ್ರಮಕ್ಕೆ:

ಊಟ ನೀಡಲೆಂದು ತಯಾರಿಸಿ ತಂದಿದ್ದ ಊಟವನ್ನು ಕಾಲೇಜಿನ ಗೇಟಿನ ಹೊರಗಡೆಯಿಂದಲೇ ಕೆಲವೆ ಕೆಲವು ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಲಾಯಿತು. ಆದರೆ ಈ ಗೊಂದಲದಿಂದ ಅದೆಷ್ಟೊ ವಿದ್ಯಾರ್ಥಿಗಳು ಊಟ ಮಾಡುವ ಮನಸ್ಸಿದ್ದರೂ ಹಾಗೆಯೇ ಹೊರಟು ಹೋದರು. ಸುಮಾರು ಆರುನೂರು ವಿದ್ಯಾರ್ಥಿಗಳಿಗೆ ತಯಾರಿಸಿ ತಂದಿದ್ದ ಊಟದಲ್ಲಿ ಉಳಿದ ಊಟವನ್ನು ಅನಾಥ ಆಶ್ರಮಕ್ಕೆ ಕೊಟ್ಟಿದ್ದಾರೆ. ಉತ್ಸಾಹ ಮತ್ತು ಸಂತೊಷದಿಂದ ಊಟ ಹಂಚಿಕೆಗೆ ಬಂದಿದ್ದ ಸಂದೀಪ್.ಬಿ.ರೆಡ್ಡಿ ಇಂದು ನಡೆದ ಘಟನೆಗೆ ಬೇಸರಗೊಂಡು ಪ್ರಾಂಶುಪಾಲರೊಂದಿಗೆ ಕೊಂಚ ಹೊತ್ತು ವಾಗ್ವಾದ ಮಾಡಿದರು. ಊಟ ನೀಡಲು ತಡೆಹಾಕಿದವರು ಬೇಕಿದ್ದರೆ ನೇರವಾಗಿ ನನ್ನ ಜತೆ ಗುದ್ದಾಡಲಿ, ಆದರೆ ಮಕ್ಕಳ ಹಸಿವಿನ ಹೊಟ್ಟೆಯ ಮೇಲೆ ಹೊಡೆದಿರುವುದು ಅವರಿಗೆ ಶೋಭೆ ತರೋದಿಲ್ಲ ಎಂದು ಕಿಡಿಕಾರಿದರು.

ಸಿಕೆಬಿ-1 ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ಉಚಿತ ಊಟವನ್ನು ಕಾಲೇಜಿನ ಹೊರಗೆ ವಿತರಿಸಲಾಯಿತು.