ನಮೋ ಭಾರತ್‌ ಕಾರ್ಯಕ್ರಮಕ್ಕೆ ಅಡ್ಡಿ: ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

| Published : Feb 09 2024, 01:46 AM IST

ನಮೋ ಭಾರತ್‌ ಕಾರ್ಯಕ್ರಮಕ್ಕೆ ಅಡ್ಡಿ: ಕಾಂಗ್ರೆಸ್‌ ಕಾರ್ಯಕರ್ತರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಇಲ್ಲಿನ ತಾಲೂಕು ಕಚೇರಿಯಿಂದ ಆಶೀರ್ವಾದ ವೃತ್ತದ ಕಡೆಗೆ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊಂದಿಕೊಂಡಿರುವ ಕಟ್ಟಡದ ಮೇಲೆ ನಿಂತು, ಚಕ್ರವರ್ತಿ ಸೂಲಿಬೆಲೆ ಭಾಷಣ ಆರಂಭವಾಗುತ್ತಿದ್ದಂತೆ ಅವರ ವಿರುದ್ಧದ ಬ್ಯಾನರ್‌ನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕಾಣುವಂತೆ ಕೆಳಗೆ ಇಳಿ ಬಿಟ್ಟರು, ಆಗ ಕೂಡಲೇ ಪೊಲೀಸರು ಆ ಬ್ಯಾನರ್‌ನ್ನು ಹರಿದು ಹಾಕಿದರು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಇದರ ನಡುವೆಯೇ ವೇದಿಕೆಯಲ್ಲಿದ್ದ ಸಿ.ಟಿ. ರವಿ ಅವರು ಕೂಡಾ ವೇದಿಕೆಯಿಂದ ಕೆಳಗೆ ಇಳಿದು ಬಂದು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಯಾವ ಮಟ್ಟಿಗೆ ಇತ್ತೆಂದರೆ, ಕೆಲವು ಬಿಜೆಪಿ ಕಾರ್ಯಕರ್ತರು ಲೈಟ್ ಕಂಬ ಹತ್ತಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಿದರು. ಒಂದು ಹಂತದಲ್ಲಿ ಪೊಲೀಸರು ಹಾಗೂ ಬಿಜೆಪಿಗರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟವೂ ನಡೆಯಿತು.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದರಿಂದ ಕಟ್ಟಡದೊಳಗೆ ಇದ್ದ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಹೊರಗೆ ಬರದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಂಡಿದ್ದರು. ಆಗ ಕಟ್ಟಡದ ಮೇಲೆ ಕೆಲವರು ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಚಕ್ರವರ್ತಿ ಸೂಲಿಬೆಲೆ ಮತ್ತೆ ಭಾಷಣ ಆರಂಭವಾಗುತ್ತಿದ್ದಂತೆ ಕೆಲವು ಬಿಜೆಪಿ ಕಾರ್ಯಕರ್ತರು ವೇದಿಕೆಯತ್ತ ನಡೆಯುತ್ತಿದ್ದಂತೆ ಪೊಲೀಸರು ಕಟ್ಟಡದೊಳಗೆ ಇದ್ದ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು.

ಗೊಂದಲದಿಂದಾಗಿ ಭಾಷಣ ಮೊಟಕುಗೊಳಿಸಿದ್ದ ಸೂಲಿಬೆಲೆ ಅವರು ಮತ್ತೆ ತಮ್ಮ ಭಾಷಣವನ್ನು ಮುಂದುವರೆಸಿದರು, ಎಂದಿನಂತೆ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಾ, ಪ್ರಧಾನಿ ನರೇಂದ್ರ ಮೋದಿಯುವರ ಸಾಧನೆಯನ್ನು ಕೊಂಡಾಡಿದರು.

ಸ್ಥಳದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಕಾರ್ಯಕ್ರಮ ಮುಗಿಯುವವರೆಗೆ ಮೊಕ್ಕಂ ಹೂಡಿದ್ದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.