ಲೋಕಾ ಕಾರ್ಯವೈಖರಿ ಬಗ್ಗೆ ಮುಖಂಡರ ಅಸಮಾಧಾನ

| Published : May 24 2025, 12:16 AM IST

ಸಾರಾಂಶ

ಲೋಕಾಯುಕ್ತ ಅಧಿಕಾರಿಗಳ ದೂರು ಸ್ವೀಕಾರ ಕಾರ್ಯಕ್ರಮದ ವೇಳೆ ಲೋಕಾಯುಕ್ತರ ಕಾರ್ಯವೈಖರಿಯ ಬಗ್ಗೆಯೇ ಮುಖಂಡರೊಬ್ಬರು ಅಸಮಾಧಾನ ಹೊರ ಹಾಕಿದರೆ, ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಅವರ ದಬ್ಬಾಳಿಕೆ, ದೌರ್ಜನ್ಯ ಕುರಿತಂತೆ ಪುರಸಭೆ ಮಾಜಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಲೋಕಾಯುಕ್ತ ಅಧಿಕಾರಿಗಳ ದೂರು ಸ್ವೀಕಾರ ಕಾರ್ಯಕ್ರಮದ ವೇಳೆ ಲೋಕಾಯುಕ್ತರ ಕಾರ್ಯವೈಖರಿಯ ಬಗ್ಗೆಯೇ ಮುಖಂಡರೊಬ್ಬರು ಅಸಮಾಧಾನ ಹೊರ ಹಾಕಿದರೆ, ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಅವರ ದಬ್ಬಾಳಿಕೆ, ದೌರ್ಜನ್ಯ ಕುರಿತಂತೆ ಪುರಸಭೆ ಮಾಜಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೋಲೀಸರು ಸಾರ್ವಜನಿಕರಿಂದ ದೂರು ಸ್ವೀಕರಿಸುವ ವೇಳೆ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ನಡೆಯ ಬಗ್ಗೆ ಕಿಡಿ ಕಾರಿದ ಪುರಸಭೆ ಮಾಜಿ ಅಧ್ಯಕ್ಷ ಎಸ್. ಮದನ್ ರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಅವರು ವಿನಾಕಾರಣ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿರುವುದರಿಂದ ಬಡ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದಿ ಬದಿಯಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡದೇ ಇನ್ಸ್‌ ಪೆಕ್ಟರ್ ವ್ಯಾಪಾರಿಗಳ ಮೇಲೆ ಗದಾ ಪ್ರಹಾರ ನಡೆಸಲು ಮುಂದಾಗಿದ್ದಾರೆ. ವ್ಯಾಪಾರಿಗಳ‌ಜೊತೆ ಸಂಯಮದಿಂದ ವರ್ತಿಸದ ಇವರು ಅವರನ್ನು ಅಶ್ಲೀಲ ಪದಗಳಿಂದ ನಿಂದಿಸುವ ಕಾಯಕದಲ್ಲಿ ನಿರತರಾಗಿದ್ದಾರೆ, ಪುರಸಭೆಯವರೊಂದಿಗೆ ಪೊಲೀಸರು ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಿಸುವ ಮೂಲಕ ಅವೈಜ್ಞಾನಿಕ ನಡೆ ಪ್ರದರ್ಶನ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡದ ಪುರಸಭೆಯವರು ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಲು 12 ಲಕ್ಷ ರು. ಗಳಿಗೆ ಟೆಂಡರ್ ಕರೆದಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಪ್ರಶ್ನಿಸಿದರು. ಬೀದಿ ಬದಿ ವ್ಯಾಪಾರ ಬೇಡವೆಂದರೆ ಕರೆದಿರುವ ಟೆಂಡರ್ ರದ್ದು ಮಾಡಲಿ ಎಂದು ಒತ್ತಾಯಿಸಿದರು.

ವ್ಯಾಪಾರಿಗಳಿಗೆ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು, ಸಿಪಿಐ ಅವರು ತಮ್ಮ‌ನಿಲುವು ಬದಲಿಸಿಕೊಂಡು ವ್ಯಾಪಾರಸ್ಥರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಇಲ್ಲದಿದ್ದಲ್ಲಿ ಟಿ. ನರಸೀಪುರ ಪಟ್ಟಣವನ್ನು ಮೂರು ದಿನಗಳ ಕಾಲ ನಿರಂತರವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿವಕುಮಾರ್ ಮಾತನಾಡಿ, ಲೋಕಾಯುಕ್ತರು ಪ್ರತಿ ಬಾರಿ ಬಂದಾಗಲೂ ದೂರು ಸ್ವೀಕರಿಸಿ ಹೋಗುತ್ತಾರೆ. ಸಾರ್ವಜನಿಕರಿಂದ ಪಡೆದ ದೂರು ಏನಾಯ್ತು, ದೂರಿನ‌ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಯ್ತ, ಎಷ್ಟು ಅಧಿಕಾರಿಗಳಿಗೆ ನೋಟೀಸ್ ಜಾರಿಯಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಎಲ್ಲ ನಿಗೂಢವಾಗಿದೆ. ಹಾಗಾಗಿ ನೀವು ಈ ಹಿಂದೆ ಪಡೆದ ದೂರಿನ ವಿವರ ನೀಡಿ ಉಳಿದ ದೂರು ಸ್ವೀಕರಿಸಿ ಎಂದರು.

ಆದರೆ ಲೋಕಾಯುಕ್ತ ಅಧಿಕಾರಿಗಳಿಂದ ಅವರು ಸಮರ್ಪಕ ಉತ್ತರ ದೊರಕಲಿಲ್ಲ, ಬದಲಿಗೆ ಶಿವಕುಮಾರ್‌ ಅವರನ್ನು ನಿರ್ಲಕ್ಷ್ಯ ಮಾಡಿ ಕುಳಿತುಕೊಳ್ಳುವಂತೆ ಸೂಚಿಸಿದ್ದು ಮಾತ್ರ ಲೋಕಾಯುಕ್ತರ ಕಾರ್ಯ ವೈಖರಿ ಬಗ್ಗೆ ಅನುಮಾನ‌ಮೂಡುವಂತೆ ಮಾಡಿತು.

ದೂರು ಸ್ವೀಕಾರ ಕಾರ್ಯಕ್ರಮದಲ್ಲಿ 25 ದೂರುಗಳು ಸಲ್ಲಿಕೆಯಾದವು. ಅವುಗಳಲ್ಲಿ ಬಹುತೇಕ, ದೂರುಗಳು ಪಂಚಾಯ್ತಿ, ಗ್ರಾಮ ಲೆಕ್ಕಾಧಿಕಾರಿ, ಆರ್‌ಐ ಹಾಗೂ ಕಂದಾಯ ಇಲಾಖೆಗೆ ಸಂಬಂಧ ಪಟ್ಟವೇ ಆಗಿದ್ದವು.

ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸೇವಾ ಕಾಲಾವಧಿಯನ್ನು ಕಾಣುವಂತೆ ಪ್ರದರ್ಶನ ಮಾಡಬೇಕು, ಕಚೇರಿ ನೌಕರರು ಸರಿಯಾದ ವೇಳೆಗೆ ಕಚೇರಿಗೆ ಹಾಜರಾಗಬೇಕು ಎಂದರು.

ರೈತ ಮುಖಂಡ ಮಹದೇವಸ್ವಾಮಿ, ಎಸ್.ಕೆ. ರಾಜುಗೌಡ, ಹಲವಾರು ಗ್ರಾಮಸ್ಥರು ಸಮಸ್ಯೆ ಕುರಿತಂತೆ ದೂರು ಸಲ್ಲಿಸಿದರು.

ಲೋಕಾಯುಕ್ತ ಪಿಎಸ್.ಐ ಉಮೇಶ್, ತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್, ಬಿಇಒ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ಸೆಸ್ಕ್‌ವೀರೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರವಿಕುಮಾರ್, ಎಇಇ ಚರಿತ ಇದ್ದರು.