ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಅಸಮಾಧಾನ

| Published : Jan 04 2024, 01:45 AM IST

ಸಾರಾಂಶ

ಜೆಜೆಎಂ ಅವ್ಯವಹಾರ ಅಗಿದೆ. ಸಿಬಿಐ ತನಿಖೆ ಆಗಬೇಕು ಎಂದು ರಾಜ್ಯದ ೨೮ ಸಂಸದರು ಪತ್ರ ಬರೆದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ತಿಳಿದಿದೆಯೇ? ಕರ್ನಾಟಕದಲ್ಲಿ ಎಲ್ಲಿಯೂ ಶೇ. ೮೦ ಕಾಮಗಾರಿ ಸರಿಯಾಗಿಲ್ಲ. ಸಾಕಷ್ಟು ಕಡೆ ದೂರು ಇದೆ.

ಕಾರವಾರ:

ಜಿಲ್ಲೆಯಲ್ಲಿ ಪೂರ್ಣಗೊಂಡ ಜಲ ಜೀವನ್ ಮಿಷನ್ (ಜೆಜೆಎಂ) ಸರಿಯಾಗಿ ಅನುಷ್ಠಾನ ಆಗಿಲ್ಲ. ಸಾಕಷ್ಟು ಕಡೆ ದೂರು ಬಂದಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ? ಸಭೆಗೆ ತಪ್ಪು ಮಾಹಿತಿ ನೀಡಬೇಡಿ ಎಂದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತೋರಿಸಲಿ ಎಂದು ಸವಾಲು ಹಾಕಿದರು. ಅನಂತಕುಮಾರ ಹೆಗಡೆ, ಶಾಸಕರೇ ಒಂದು ಸಕ್ಸಸ್ ಆಗಿದಯೇ ಎಂದು ತೋರಿಸಿಕೊಡಿ ಎನ್ನುತ್ತಾರೆ. ಅದರ ಅರ್ಥವೇನು? ಜೆಜೆಎಂ ಅವ್ಯವಹಾರ ಅಗಿದೆ. ಸಿಬಿಐ ತನಿಖೆ ಆಗಬೇಕು ಎಂದು ರಾಜ್ಯದ ೨೮ ಸಂಸದರು ಪತ್ರ ಬರೆದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ತಿಳಿದಿದೆಯೇ? ಕರ್ನಾಟಕದಲ್ಲಿ ಎಲ್ಲಿಯೂ ಶೇ. ೮೦ ಕಾಮಗಾರಿ ಸರಿಯಾಗಿಲ್ಲ. ಸಾಕಷ್ಟು ಕಡೆ ದೂರು ಇದೆ. ತಾವು ಪತ್ರ ಬರೆಯಲು ಹೇಳಿದರೆ ೨೮ ಸಂಸದರೂ ಸಹಿ ಹಾಕುತ್ತಾರೆ. ಪ್ರಗತಿ ಪರಿಶೀಲನಾ ಸಭೆ ಸುಮ್ಮನೆ ಮಾಡುವುದಿಲ್ಲ. ಸಭೆ ನಡೆಸುವುದು ಕೇವಲ ಶಿಷ್ಟಾಚಾರವಲ್ಲ. ಅಭಿವೃದ್ಧಿ ಆಗಬೇಕು ಎಂದು ಸಭೆ ಮಾಡುತ್ತಾರೆ ಎಂದು ಬುದ್ಧಿಮಾತು ಹೇಳಿದರು.ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜೆಜೆಎಂ ಯೋಜನೆ ಹರಿಯುವ ನೀರಿನಿಂದ ನೀರನ್ನು ತರಬೇಕು ಎಂದಿದೆ. ಆದರೆ ಅಧಿಕಾರಿಗಳು ಬೋರ್‌ವೆಲ್, ಬಾವಿಯಂತಹ ಮೂಲದಿಂದ ನೀರು ಪಡೆಯುತ್ತಾರೆ. ಹೀಗಾಗಿ ಯೋಜನೆ ವಿಫಲವಾಗುತ್ತಿದೆ ಎಂದರು.ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡು ಹಸ್ತಾಂತರವಾಗಿದೆ ಎಂದು ಮಾಹಿತಿ ಪಡೆದು ಟಾಸ್ಕ್‌ಪೋರ್ಸ್ ಮಾಡಿಕೊಂಡು ಪರಿಶೀಲಿಸುತ್ತೇವೆ ಎಂದರು. ಸಂಸದರು ಸ್ಥಳೀಯ ಶಾಸಕರನ್ನು, ದಿಶಾ ಸಮಿತಿ ಸದಸ್ಯರನ್ನು ಟಾಸ್ಕ್‌ಪೋರ್ಸ್‌ಗೆ ಸೇರಿಸಿಕೊಳ್ಳಿ ಎಂದರು.ಡಿಎಚ್‌ಒ ಡಾ. ನಿರಜ್ ಬಿ.ವಿ. ಮಾತನಾಡಿ, ಅಂಗವಿಕಲರ ಯುಡಿಐಡಿ ಕಾರ್ಡ್ ೧೯ ಸಾವಿರ ವಿತರಣೆಯಾಗಿದೆ. ೫೫೫ ಜನರಿಗೆ ನೀಡಬೇಕಿದೆ. ಈ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.ಡಾ. ಶಂಕರ ರಾವ್ ಮಾತನಾಡಿ, ಆಯುಷ್ಮಾನ್‌ ಕಾರ್ಡ್‌ಗೆ ಮೊಬೈಲ್ ಆಪ್ ಬಿಡುಗಡೆಯಾಗಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ, ಗೋಡೆ ಬರಹದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಸಿದ ಅನಂತಕುಮಾರ, ಗ್ರಾಮಸಭೆ ಇತ್ಯಾದಿ ಪ್ರಚಾರ ನೀಡಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಹಳೆ ಕಾಲದ ಗೋಡೆ ಬರಹ ಬೇಡ. ಪ್ರಚಾರದ ಕಾರ್ಯ ಡಿಜಿಟಲ್ ಆಗಬೇಕು. ಒಬಿರಾಯನ ಕಾಲದ ಪದ್ಧತಿ ಇಂದು ಯಾರಿಗೂ ತಲುಪುವುದಿಲ್ಲ ಎಂದು ಅಭಿಪ್ರಾಯಿಸಿದರು.ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮೊದಲಾದವರು ಇದ್ದರು.ರಾಷ್ಟ್ರೀಯ ಹೆದ್ದಾರಿ ಬಗ್ಗೆ ಅಸಮಾಧಾನಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಕಂಪನಿಗಳ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ, ಎನ್‌ಎಚ್‌ಎಐ, ಗುತ್ತಿಗೆ ಪಡೆದ ಕಂಪನಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಪ್ರತಿ ಬಾರಿ ಅದೇ ಚರ್ಚೆ ನಡೆಯುತ್ತಿದೆ. ಕಥೆ ಹೇಳುವುದನ್ನು ನೀವು ನಿಲ್ಲಿಸಬೇಕು. ಪ್ರತಿ ಸಭೆಯಲ್ಲೂ ಅದೇ ಅಝೆಂಡಾ ಬರುತ್ತಿದೆ. ಈ ಹಿಂದೆ ಟೋಲ್ ಬಂದ್ ಮಾಡುವ ಬಗ್ಗೆ ಹೇಳಿದ್ದೇವೆ. ಈಗ ಅದನ್ನು ಗಂಭೀರವಾಗಿ ಕಾರ್ಯರೂಪಕ್ಕೆ ತರಬೇಕಾದ ಪರಿಸ್ಥಿತಿಯಿದೆ. ಕೃಷರ್ ಪರ್ಮಿಷನ್‌ ಇಲ್ಲ, ಹಾಗಿಲ್ಲ. ಹೀಗಿಲ್ಲ ಎನ್ನುತ್ತಿದ್ದೀರಿ. ರಾಷ್ಟ್ರೀಯ ಹೆದ್ದಾರಿ 66ರ ಯೋಜನೆ ಪ್ರಾರಂಭವಾಗಿ ೧೦ ವರ್ಷ ಕಳೆದಿದೆ. ಏನು ಮಾಡುತ್ತಿದ್ದೀರಿ? ಎಂದು ಕಿಡಿಕಾರಿದರು. ಶಾಸಕ ದಿನಕರ ಶೆಟ್ಟಿ, ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಮಾಡಲು ಕೊಡುವುದಿಲ್ಲ. ಕೃಷರ್ ಏಕೆ ಅವಕಾಶವಿಲ್ಲ. ಏನು ತೊಂದರೆಯಾಗಿದೆ? ಕೆಲಸ ಮಾಡದೇ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಅನಂತಕುಮಾರ ಎನ್‌ಎಚ್‌ಎಐ ಸಿಎಂಡಿ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿ ಬಗ್ಗೆ ವಿವರಿಸಿದರು. ವೇಗ ಪಡೆದುಕೊಳ್ಳಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.