ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪುರಸಭೆ ಕಟ್ಟಡ ನಿರ್ಮಾಣ ಸೇರಿದಂತೆ 1.5 ಕೋಟಿ ರು.ಗಳ ಕಾಮಗಾರಿಗಳು ವಾರ್ಡ್ ಜನ ಪ್ರತಿನಿಧಿಗಳ ಗಮನಕ್ಕೆ ಬಾರದೆ ನಡೆದಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.ಪುರಸಭೆಯ ನೂತನ ಕಟ್ಟಡ ನಿರ್ಮಾಣ ಸಂದರ್ಭ 1.25 ಕೋಟಿ ರು. ವೆಚ್ಚದ ಬೃಹತ್ ಮೊತ್ತದ ಕಾಮಗಾರಿಗೆ ಅಧ್ಯಕ್ಷರು ಘಟನೋತ್ತರ ಅನುಮತಿ ನೀಡಿದ್ದು, ಈ ಬಗ್ಗೆ ಮತ್ತು ಕುಶಾಲನಗರ ಪಟ್ಟಣ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ 16.5 ಲಕ್ಷ ರು. ಗಳ ಕಾಮಗಾರಿಗೆ ಸಭೆ ಅನುಮೋದನೆ ಪಡೆದಿಲ್ಲ ಎನ್ನುವ ವಿಷಯ ಚರ್ಚೆಗೆ ಗ್ರಾಸವಾಯಿತು.
ಸದಸ್ಯರಾದ ಅಮೃತರಾಜ್ ಮಾತನಾಡಿ, ತುರ್ತು ಸಂದರ್ಭ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಕೆಲವು ಮಿತಿಯಲ್ಲಿ ಮಾತ್ರ ಕೆಲಸ ಮಾಡಬಹುದು. ಆದರೆ ವಾರ್ಡ್ ಸದಸ್ಯರ ಹಕ್ಕನ್ನು ಕಸಿಯುವುದು ಸರಿಯಲ್ಲ ಎಂದರು.ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಹಾಗೂ ಕಾಮಗಾರಿ ಅನುಮೋದನೆ ನೀಡುವ ನಿಟ್ಟಿನಲ್ಲಿ ಚರ್ಚಿಸದೆ ಅಧ್ಯಕ್ಷರು ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣ ವ್ಯಾಪ್ತಿಯ ವಾರ್ಡ್‌ಗಳ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಬಗ್ಗೆ ಹಿಂದಿನ ಎಂಜಿನಿಯರ್ ಮತ್ತು ಮುಖ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ ಬಗ್ಗೆ ಸಭೆಗೆ ದಾಖಲೆಗಳನ್ನು ಒದಗಿಸಿದರೂ ಸದಸ್ಯರು ತೃಪ್ತರಾಗದೆ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು. ಈ ಸಂದರ್ಭ ಎನ್‌ಡಿಆರ್‌ಎಫ್ ಮೂಲಕ ಕೂಡ ಕಾಮಗಾರಿ ನಡೆದಿದೆ. ಕಾಮಗಾರಿಯ ಬಗ್ಗೆ ಗೊಂದಲ ಇದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಸಭೆ ಒಮ್ಮತದ ನಿರ್ಧಾರ ಕೈಗೊಂಡಿತು.ಮಧ್ಯವರ್ತಿ ಹಾವಳಿ ಕಡಿವಾಣಕ್ಕೆ ಆಗ್ರಹ:ಕುಶಾಲನಗರ ಪುರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ತೀವ್ರ ಚರ್ಚೆ ನಡೆಯಿತು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸದಸ್ಯ ಆನಂದ್ ಕುಮಾರ್ ಮಾತನಾಡಿ, ಪುರಸಭೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರ ಕಡತಗಳ ಕುರಿತು ಕೆಲವು ಸಿಬ್ಬಂದಿ ಮಧ್ಯವರ್ತಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಆಗ ಮಧ್ಯವರ್ತಿಗಳು ಅರ್ಜಿದಾರರನ್ನು ಭೇಟಿ ಮಾಡಿ ಅರ್ಜಿಗೆ ಇಂತಿಷ್ಟು ಮೊತ್ತದ ಹಣ ನಿಗದಿ ಮಾಡಿ ಕೆಲಸ ಮಾಡಿಸಿಕೊಡುವ ಜಾಯಮಾನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಬೆಳಗ್ಗೆಯಿಂದ ಸಂಜೆ ತನಕ ಮಧ್ಯವರ್ತಿಗಳು ಪುರಸಭೆ ಕಚೇರಿಯಲ್ಲಿ ನಿರಂತರ ಓಡಾಟ ಮಾಡುತ್ತಿರುವುದು ಸಾಮಾನ್ಯ ಚಿತ್ರಣವಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ಮುಖ್ಯಾಧಿಕಾರಿ ಗಿರೀಶ್ ಪ್ರತಿಕ್ರಿಯಿಸಿ, ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಸಿಬ್ಬಂದಿಗಳ ಸಭೆ ಕರೆದು ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಸೂಚನೆ ಉಲ್ಲಂಘಿಸಿ ಮಧ್ಯವರ್ತಿಗಳೊಂದಿಗೆ ಶಾಮೀಲಾಗುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸದಸ್ಯ ನವೀನ್ ಕುಮಾರ್ ಮಾತನಾಡಿ, ಕಚೇರಿಯಲ್ಲಿ ಮೊದಲು ದೂರು ಪೆಟ್ಟಿಗೆ ಅಳವಡಿಸಿ. ಜೊತೆಗೆ ಲೋಕಾಯುಕ್ತ ಅಧಿಕಾರಿಗಳ ಮೊಬೈಲ್ ನಂಬರ್ ಕೂಡ ಹಾಕಬೇಕು. ಸಾರ್ವಜನಿಕರು ದೂರು ನೀಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಸಾರ್ವಜನಿಕರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಅವರನ್ನು ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ಕಚೇರಿಯಲ್ಲಿ ಪ್ರಸ್ತುತ 41 ಫೈಲುಗಳು ಬಾಕಿ ಇವೆ. ಕಳೆದ ತಿಂಗಳು 70 ಹಾಗೂ ಮೇನಲ್ಲಿ 80 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.ಪಟ್ಟಣದ 3ನೇ ಬ್ಲಾಕ್, ಬಿ.ಎಂ.ರಸ್ತೆಯಲ್ಲಿರುವ ವೆಂಕಟೇಶ್ವರ ಚಿತ್ರ ಮಂದಿರವನ್ನು ಬಾಡಿಗೆ ನೀಡುವ ಕುರಿತು ಚರ್ಚೆ ನಡೆಯಿತು. ಸದಸ್ಯ ಕಲಿಮುಲ್ಲಾ, ಪ್ರಮೋದ್ ಮಾತನಾಡಿ, ಈ ಕುರಿತು ಕಾನೂನು ಸಲಹೆಗಾರದಿಂದ ಸಲಹೆ ಪಡೆದು ಬಾಡಿಗೆ ನೀಡುವಂತೆ ತಿಳಿಸಿದರು.ಸದಸ್ಯ ಬಿ.ಜೈವರ್ಧನ್ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ವಿಚಾರ ಅಜೆಂಡಾದಲ್ಲಿ ಸೇರಿಸುವಂತೆ ಸಲಹೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಬಾಬು ಜಗಜೀವನ್‌ರಾಮ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಕೋರಿ ಬಂದಿರುವ ಪತ್ರದ ಬಗ್ಗೆ ಸದಸ್ಯ ಜೈವರ್ಧನ್ ಗಮನ ಸೆಳೆದರು. ಭವನಕ್ಕೆ 2 ಕೋಟಿ ಅನುದಾನ ನೀಡುತ್ತಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಶಿವಶಂಕರ್ ಕಾಳಮ್ಮ ಕಾಲೋನಿ ಬಳಿ 30 ಸೆಂಟ್ ಜಾಗ ಇದೆ. ಇದು ಬಾಬು ಜಗಜೀವನ್ ರಾಮ್ ಯುವಕ ಸಂಘದ ಹೆಸರಿನಲ್ಲಿ ಇದೆ. ಈ ಜಾಗವನ್ನು ಭವನಕ್ಕೆ ಬಿಟ್ಟು ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬೇಕು ಎಂದರು.ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಂದಾಯ ವಸೂಲಿ ಆಗುತ್ತಿದ್ದರೂ ಪುರಸಭೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಗ್ರಾಮಕ್ಕೆ ಬರುತ್ತಿಲ್ಲ. ಮುಂದಿನ ಸಾಲಿನಿಂದ ಹೆಚ್ಚಿನ ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸದಸ್ಯ ಎಂ.ವಿ.ಹರೀಶ್, ಪದ್ಮಾವತಿ ಒತ್ತಾಯಿಸಿದರು.* ಪೌರಕಾರ್ಮಿಕರಿಗೆ ಉಪಹಾರ ಸಾಕಾಗುತ್ತಿಲ್ಲ:
ಪೌರಕಾರ್ಮಿಕರಿಗೆ ಬೆಳಗ್ಗೆ ಸಮಯದಲ್ಲಿ ನೀಡಲಾಗುತ್ತಿರುವ ಉಪಹಾರ ಪ್ರಮಾಣ ಸಾಕಾಗುತ್ತಿಲ್ಲ. ಪ್ರತಿನಿತ್ಯ ಒಂದೇ ತರದ ತಿಂಡಿ ನೀಡಲಾಗುತ್ತಿದೆ ಎಂದ ಸದಸ್ಯರಾದ ಪ್ರಕಾಶ್, ಶಿವಶಂಕರ್, ನವೀನ್, ಹೆಚ್ಚಿನ ಭತ್ಯೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.ಈ ಬಗ್ಗೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸರ್ಕಾರ ಉಪಹಾರಕ್ಕೆ 35 ರು. ನಿಗದಿ ಮಾಡಿದೆ. ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದರು.
ಸದಸ್ಯ ಪ್ರಮೋದ್ ಮಾತನಾಡಿ, ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟಿನ್‌ಗೆ ವಹಿಸುವ ಸಲಹೆ ನೀಡಿದರು.ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಜಾಗ ಒದಗಿಸಿಕೊಡುವಂತೆ ಸದಸ್ಯ ಪ್ರಕಾಶ್, ನವೀನ್ ಮನವಿ ಮಾಡಿದರು. ಈ ವಿಚಾರವನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಎಂಜಿನಿಯರ್ ಅರ್ಬಾಸ್, ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್, ಸಿಬ್ಬಂದಿ ನಂಜುಂಡ, ಧನಂಜಯ ಮತ್ತಿತರರು ಇದ್ದರು.