ಮನೆ, ಶಾಲಾ ಕಾಲೇಜುಗಳ ಗಣೇಶ ಮೂರ್ತಿಗಳ ವಿಸರ್ಜನೆ

| Published : Sep 13 2024, 01:35 AM IST

ಸಾರಾಂಶ

ಅಥಣಿ ಪಟ್ಟಣದಲ್ಲಿ ವಿವಿಧ ಶಾಲೋ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೆರವಣಿಗೆಯ ಮೂಲಕ ಆಗಮಿಸಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು 5ನೇ ದಿವಸವಾದ ನಿನ್ನೆ ಬುಧವಾವ ಶ್ರದ್ಧಾ, ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಸಡಗರ ಸಂಭ್ರಮದಿಂದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಪಟ್ಟಣದ ಪುರಸಭೆ ಆಡಳಿತ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸಿದ್ದೇಶ್ವರ ದೇವಸ್ಥಾನದ ಹತ್ತಿರದ ಭಾಗೀರಥಿ ನಾಲಾದಲ್ಲಿ ಮತ್ತು ಜೋಡಿ ಕೆರೆಗಳ ಹತ್ತಿರ ನಿರ್ಮಿಸಲಾದ ಪ್ರತ್ಯೇಕ ಬಾವಿಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳಲ್ಲಿ ಮತ್ತು ತೆರೆದ ಬಾವಿಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದನ್ನು ನಿಷೇಧಿಸಲಾಗಿದ್ದು, ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಮೂರ್ತಿಗಳನ್ನು ವಿಸರ್ಜನೆ ಮಾಡುವಂತೆ ಈಗಾಗಲೇ ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಸೂಚನೆ ನೀಡಿದ್ದರು.

ಗ್ರಾಮೀಣ ಪ್ರದೇಶದ ಜನರು ಸಮೀಪದಲ್ಲಿ ಇರುವ ತೆರೆದ ಬಾವಿಗಳಲ್ಲಿ, ಕೆರೆಗಳಲ್ಲಿ, ಹರಿಯುತ್ತಿರುವ ನಾಲಾಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. ಇನ್ನೂ ಕೃಷ್ಣಾ ನದಿ ತೀರದ ಗ್ರಾಮಸ್ಥರು ಗಣೇಶ ಮೂರ್ತಿಗಳನ್ನ ಭವ್ಯ ಮೆರವಣಿಗೆ ಮತ್ತು ಪಟಾಕಿಗಳನ್ನು ಸಿಡಿಸುತ್ತ ಕೃಷ್ಣಾ ನದಿಗೆ ಆಗಮಿಸಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಳ್ಳುವ ಮೂಲಕ ಸಂಭ್ರಮ ಸಡಗರದಿಂದ ಗಣೇಶ ವಿಸರ್ಜನೆ ಮಾಡಿದರು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಯಾವುದೇ ಅಹಿತಕರ ಘಟನೆಗಳು ಜರುಗುದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು. ಪಟಾಕಿಗಳ ಮಾರಾಟವನ್ನು ಮಾರುಕಟ್ಟೆಯ ಸ್ಥಳದಿಂದ ಸ್ಥಳಾಂತರಿಸಿ ಸಿದ್ದೇಶ್ವರ ಅವಶ್ಯ ಹತ್ತಿರ ಬಯಲು ಪ್ರದೇಶದಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಸಾರ್ವಜನಿಕ ಗಣೇಶ ಮಹಾಮಂಡಳದ ವಿವಿಧ ಗಲ್ಲಿಯ ಗಣೇಶ ಮೂರ್ತಿಗಳ 7 ಮತ್ತು 9ನೇ ದಿವಸಕ್ಕೆ ವಿಸರ್ಜನೆಯಾಗಲಿದ್ದು, ಪಟ್ಟಣದಲ್ಲಿ ಇನ್ನೂ ಗಣೇಶ ಆರಾಧನೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಿರಂತರವಾಗಿವೆ.