ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹಕ್ಕೆ ಗಲ್ಲಿ ಗಲ್ಲಿಯಲ್ಲಿಯೂ ಎಣ್ಣೆ ಅಂಗಡಿ ತೆರೆಯಲು ಪರವಾನಿಗೆ ನೀಡದೆ ಸಾಲದಕ್ಕೆ ದಿನಸಿ ಅಂಗಡಿಗಳಲ್ಲಿಯೂ ಎಣ್ಣೆ ಮಾರಾಟ ಮಾಡುತ್ತಿದೆ.

ಸಿಎಂಗೆ ಬಿ.ವೈ.ವಿಜಯೇಂದ್ರ ಸವಾಲು । ರಾಜ್ಯದಲ್ಲಿ ಭೀಕರ ಬರಗಾಲ ನಿರ್ವಹಣೆ ಮಾಡಲು ಸರ್ಕಾರ ವಿಫಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯದಲ್ಲಿ ಭೀಕರವಾಗಿ ಬರಗಾಲ ಎದುರಾಗಿದೆ,ಅದನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ಹಣ ನೀಡಿಲ್ಲವೆಂದು ದೂಷಣೆ ಮಾಡುವ ಬದಲು ವಿಧಾನಸಭೆ ವಿರ್ಸಜನೆ ಮಾಡಿ ಜನರ ಮುಂದೆ ಹೋಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ.ವಿಜಯೇಂದ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.

ನಗರದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ನಡೆದ ಸೇವಾ ಸಂಕಲ್ಪ ಅಭಿಯಾನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಡೆಸಲು ಆಗದೆ ಒದ್ದಾಡುತ್ತಿದೆ, ಹಣ ಕ್ರೋಡಿಕರಿಸಲು ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹಕ್ಕೆ ಗಲ್ಲಿ ಗಲ್ಲಿಯಲ್ಲಿಯೂ ಎಣ್ಣೆ ಅಂಗಡಿ ತೆರೆಯಲು ಪರವಾನಿಗೆ ನೀಡದೆ ಸಾಲದಕ್ಕೆ ದಿನಸಿ ಅಂಗಡಿಗಳಲ್ಲಿಯೂ ಎಣ್ಣೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬುದಕ್ಕೆ ಕಾಂಗ್ರೆಸ್ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದು ಸಚಿವರಿಗೆ ಕಾಮಗಾರಿಗಳಲ್ಲಿ 8 ರಷ್ಟು ಕಮೀಷನ್ ನೀಡಬೇಕು ಎಂದು ಹೇಳಿರುವುದೇ ಸಾಕ್ಷಿ ಎಂದು ಟೀಕಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಹೈನೋದ್ಯಮ ಬೆಳೆಸಲು ರೈತರಿಗೆ ಉತ್ತೇಜನ ನೀಡಲು 1 ಲೀ. ಹಾಲಿಗೆ 2 ರು. ಪ್ರೋತ್ಸಾಹಧನ ಘೋಷಣೆ ಮಾಡಿದರು. ಹಾಲಿ ಸರ್ಕಾರ ಅದನ್ನೂ ಕಡಿತ ಮಾಡಲು ಹುನ್ನಾರ ಮಾಡಿದೆ. ಕನಿಷ್ಟ 5 ರು. ಏರಿಸಬೇಕೆಂದು ಆಗ್ರಹಿಸಿದರು. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಯತ್ನಿಸುತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಅದಕ್ಕೆ ವಿರುದ್ಧವಾಗಿ ಭ್ರಷ್ಟಾಚಾರದಲ್ಲಿ ತಾಂಡವಾಡುತ್ತಿದೆ. ಭ್ರಷ್ಟಾಚಾರ ಸರ್ಕಾರ ಭ್ರಷ್ಟಾಚಾರಿಗಳಿಗಾಗಿ ಆಡಳಿತ ನಡೆಸುತ್ತಿರುವಂತಿದೆ ಎಂದರು.

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿರಂತೆ ದೇಶ ಅಭಿವೃದ್ದಿ ಬಗ್ಗೆ ಚಿಂತನೆ ಅಗತ್ಯವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗಿದೆ ಎಂದರೆ ಮಾಲೂರಿನಲ್ಲಿ ಅಕ್ರಮ ಕ್ವಾರಿಗಳ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅವರನ್ನೇ ಕೊಲೆ ಮಾಡಲಾಗಿದೆ. ಸಿಎಂ ಶಿವಕುಮಾರ್‌ಗೆ ದಲಿತರ ಬಗ್ಗೆ ಕಾಳಜಿ ಇಲ್ಲ ಅವರನ್ನು ಬರೀ ಮತ ಬ್ಯಾಂಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ, ಎಸ್‌ಸಿ ಎಸ್‌ಟಿ ಸಮುದಾಯ ಅಭಿವೃದ್ದಿಗೆ ಮಿಸಲಿಟ್ಟಿದ್ದ 55ಸಾವಿರ ಕೋಟಿ ಗ್ಯಾರಂಟಿಗಳಿಗೆ ಬಳಸಿ ದಲಿತರನ್ನು ವಂಚಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿತೇ ವಿನಃ ರಾಜಕಾರಣಕ್ಕಲ್ಲ ಎಂದರು.

ರಾಜ್ಯದಲ್ಲಿ ಜನರಿಗೆ ಭ್ರಷ್ಟ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಈ ಹಿನ್ನೆಲೆ ಕಾರ್ಯಕರ್ತರು ಭಿನ್ನಮತ ಬಿಟ್ಟು ಸಂಘಟನೆಯತ್ತ ತೊಡಗಬೇಕು. ಕ್ಷೇತ್ರದಲ್ಲಿ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಬಿ.ವಿ.ಮಹೇಶ್ ಬಣ ರಾಜಕೀಯ ಬಿಟ್ಟು ಪಕ್ಷಕ್ಕಾಗಿ ಒಂದಾದಾಗ ಮಾತ್ರ ಕ್ಷೇತ್ರದಲ್ಲಿಯೂ ಕಮಲ ಅರಳಲು ಸಾಧ್ಯವಾಗಲಿದೆ. ಗ್ಯಾರಂಟಿಗಳಿಂದ ಮತ್ತೆ ನಾವು ಅಧಿಕಾರಕ್ಕೆ ಬರುವುವೇ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಕಿವಿ ಮಾತು ಹೇಳಿದರು.

ಇದಕ್ಕೂ ಮೊದಲು 1ಕಿ.ಮೀ. ಬಿ.ವೈ.ವಿಜಯೇಂದ್ರರನ್ನು ಪಾದಯಾತ್ರೆ ಮೂಲಕ ವೇದಿಕೆಗೆ ಕರ ತರಲಾಯಿತು. ದಾರಿಯುದ್ದಕ್ಕೂ ಕಾರ್ಯಕರ್ತರು ಹೂ ಚೆಲ್ಲಿ ಸ್ವಾಗತಿಸಿದರು.

ಸಭೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥಗೌಡ, ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ನಂದೀಶರೆಡ್ಡಿ,ಮಾರ್ಕಂಡೇಗೌಡ, ಇತರರು ಇದ್ದರು.