ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಇಲ್ಲಿಯವರೆಗೂ ಜಿಲ್ಲಾಧಿಕಾರಿ, ಜಿಲ್ಲಾ ಮಂತ್ರಿಗಳು ಬೆಳೆ ಸಮೀಕ್ಷೆ ಕೈಗೊಂಡಿಲ್ಲ. ರೈತರ ಗೋಳು ಕೇಳಿಲ್ಲ. ಅದಕ್ಕಾಗಿ ಈ ಭಾಗದ ರೈತರ ಬೆಳೆ ಹಾನಿ ವೀಕ್ಷಣೆಗೆ ನಾವು ಬಂದಿದ್ದೇವೆ. ಈಗ ಜಿಲ್ಲಾಧಿಕಾರಿ, ತಹಸೀಲ್ದಾರ್, ಅಧಿಕಾರಿಗಳು ಬಂದಿದ್ದಾರೆ. ಶೇ.80ರಷ್ಟು ರೈತರ ಬೆಳೆ ಹಾನಿಯಾಗಿದ್ದು, ಅತಿ ಮಳೆ, ಕಳಪೆ ಬೀಜ, ಕೀಟಭಾದೆಯಿಂದ ಬೆಳೆಗಳು ಹಾಳಾಗಿವೆ. ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ಪರಿಹಾರ ನೀಡಬೇಕು. ಇಂದಿನಿಂದಲೇ ನಾವು ಬೆಳೆ ಪರಿಹಾರ ನೀಡಲು ಆಗ್ರಹಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದರು.ತಾಲೂಕಿನ ನೇಸರಗಿ, ಮದನಬಾವಿ, ಮುರಕೀಬಾವಿ, ನಾಗನೂರ ಗ್ರಾಮಗಳಿಗೆ ಶುಕ್ರವಾರ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ಮಾಡಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ 5 ವರ್ಷ ನಾನೇ ಸಿಎಂ ಎಂಬ ಮಾತನ್ನು ಹೇಳುವುದೇ ಅವರ ಸಾಧನೆ ಆಗಿದೆ. ನಾಳೆ ಬೆಳಗಾವಿಗೆ ಬಂದು ರಿಬ್ಬನ್ ಕಟ್ ಮಾಡಿ ಬಿರಿಯಾನಿ ತಿಂದು ಹೋಗುವುದು ಅಷ್ಟೇ ಅವರ ಕೆಲಸ. ಅಧಿಕಾರಿಗಳು ಸ್ವಾಗತಿಸಿ ಐಬಿಗೆ ಕರದೆಕೊಂಡು ಹೋಗಿ ಸಮಾರಂಭ ಮಾಡಿ ಬೀಳ್ಕೊಡುಗೆ ಮಾಡುವುದಷ್ಟೇ ಇವರ ಕೆಲಸ ಆಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮೂಲಕ ದೇಶದ ಎಲ್ಲ ರಾಜ್ಯಗಳಿಗೆ ಪರಿಹಾರ ನೀಡಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಯಾವ ಪರಿಹಾರವನ್ನೂ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರಿಗೆ ₹25 ಸಾವಿರ ನೀಡಿದ್ದೇವೆ. ತಕ್ಷಣ ಮುಖ್ಯಮಂತ್ರಿ ಅವರು ಬೆಳೆ ವೀಕ್ಷಣೆ ಮಾಡಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ನಮ್ಮ ಅಧಿಕಾರ ಅವಧಿಯಲ್ಲಿ ₹3 ಲಕ್ಷ ಕೋಟಿ ಬಜೆಟ್ ಇತ್ತು. ಈಗ ₹4 ಲಕ್ಷ ಕೋಟಿ ಇದೆ. ಆದರೂ ರೈತರಿಗೆ ಪರಿಹಾರ ನೀಡುತ್ತಿಲ್ಲ. ಅತಿಯಾದ ಮಳೆಯಿಂದ ಮನೆಗಳು ನೀರಿನಿಂದ ಮುಳುಗಿದರೂ ನಯಾ ಪೈಸೆ ಪರಿಹಾರ ನೀಡುತ್ತಿಲ್ಲ. ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ರೈತರ ಸಮಸ್ಯೆ ಆಲಿಸಿದರು. ಕಳೆದ ವರ್ಷ ಇಳುವರಿಯಲ್ಲಿ ಶೇ.80 ಬೆಳೆ ಹಾನಿಯಾಗಿದೆ. ಎಕರೆಗೆ 2 ಕ್ವಿಂಟಲ್ ಸೋಯಾಬಿನ್ ಬಂದಿದ್ದು, ಕಟಾವು ಸಮಯದಲ್ಲಿ ಅತಿಯಾದ ಮಳೆ, ಕೀಟಭಾದೆ, ಕಳಪೆ ಬೀಜದಿಂದ ನಮ್ಮ ಬಾಳು ತೊಂದರೆ ಆಗಿದ್ದು ಇಂತಹ ಸಂದರ್ಭದಲ್ಲಿ ಯಾವ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳು ಸಮೀಕ್ಷೆ, ವೀಕ್ಷಣೆಗೆ ಬಂದಿಲ್ಲ ಎಂದು ರೈತರು ತಮ್ಮ ಕಷ್ಟವನ್ನು ಹೇಳಿಕೊಂಡರು.
ಈ ವೇಳೆ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಎಂಎಲ್‌ಸಿ ರವಿಕುಮಾರ, ಶಾಸಕರಾದ ಸಿದ್ದು ಸವದಿ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ದುರ್ಯೋಧನ ಐಹೋಳೆ, ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಜಗದೀಶ ಮೆಟಗುಡ್ಡ, ಡಾ.ವಿ.ಐ.ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಡಾ.ರವಿ ಪಾಟೀಲ, ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ, ಉದ್ಯಮಿ ವಿಜಯ ಮೆಟಗುಡ್ಡ, ಶ್ರೀಕರ್ ಕುಲಕರ್ಣಿ, ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶುಭಾಷ ಪಾಟೀಲ, ಹಿರಿಯ ಮುಖಂಡ ಎಂ.ಬಿ, ಜಿರಲಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಖಜಾಂಚಿ ಮಹಾಂತೇಶ ಕೂಲಿನವರ, ಬೈಲಹೊಂಗಲ ಬಿಜೆಪಿ ಮಂಡಳ ಅಧ್ಯಕ್ಷ ಶುಭಾಷ ತುರಮರಿ, ಲಕ್ಷ್ಮೀ ಇನಾಮದಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಮೆಟಗುಡ್ಡ, ಸಂತೋಷ ಹಡಪದ, ನೇಸರಗಿ ಗ್ರಾಪಂ ಅಧ್ಯಕ್ಷ ವೀರಭದ್ರ ಚೋಬಾರಿ, ತೇಜಪ್ಪಗೌಡ ಪಾಟೀಲ, ಸಂಜು ಪಾಟೀಲ, ಮಲ್ಲಿಕಾರ್ಜುನ ಸೋಮಣ್ಣವರ, ಮಲ್ಲಪ್ಪ ಮಾಳನ್ನವರ ಸೇರಿದಂತೆ ನೇಸರಗಿ ಭಾಗದ ಹಲವಾರು ರೈತರು ಇದ್ದರು.