ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ ಕಳೆದ ಮೂರು ವರ್ಷಗಳಿಂದ ತಾಲೂಕಿನಾದ್ಯಂತ ಮಳೆ ಪ್ರಮಾಣ ಕ್ಷೀಣಿಸಿದ್ದು, ರೈತ ಸಮುದಾಯ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಸಲಕರಣೆ ಹಾಗೂ ಬೀಜ, ರಸಗೊಬ್ಬರ, ಕೀಟನಾಶಕ ವಿತರಣೆಯಲ್ಲಿ ವಿತರಕರು ರೈತರ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸಬೇಕೆಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಡಾ.ಮಂಜುನಾಥ ತಿಳಿಸಿದರು.
ಶುಕ್ರವಾರ ಸೋಮಗುದ್ದು ರಸ್ತೆಯ ಉಪಕೃಷಿ ನಿರ್ದೇಶಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತರ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಸುರಕ್ಷಿತ ಕೀಟನಾಶಕ ಬೆಳೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಕೃಷಿ ಸಲಕರಣೆಗಳ ಜೊತೆಯಲ್ಲಿ ರೈತರಿಗೆ ಬಿತ್ತನೆ ಸಂದರ್ಭದಲ್ಲಿ ಅವಶ್ಯಕವಿರುವ ಗೊಬ್ಬರ, ಬೀಜ, ಕೀಟನಾಶಕವನ್ನು ಸಂಬಂಧಪಟ್ಟ ವಿತರಕರು ಸೂಕ್ತ ರೀತಿಯಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಠಿಸದೆ, ಗುಣಮಟ್ಟದ ವಸ್ತುಗಳನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಾರಾಟ ಮಾಡುವಂತೆ ಸೂಚನೆ ನೀಡಿದರು.
ಉಪಕೃಷಿ ನಿರ್ದೇಶಕ ಪ್ರಭಾಕರ್ ಮಾತನಾಡಿ, ಇಲಾಖೆಯ ಸೂಚನೆಯಂತೆ ಈಗಾಗಲೇ ಎಲ್ಲಾ ವಿತರಿಕರಿಗೂ ರೈತರ ಹಿತದೃಷ್ಠಿಯಿಂದ ಸೂಕ್ತ ಸಲಹೆ ನೀಡಲಾಗಿದೆ. ರೈತರು ಸಹ ತಮ್ಮ ಬಿತ್ತನೆ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಂದ ಸಲಹೆ ಪಡೆಯಬೇಕು. ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚು ಬಿತ್ತನೆಯಾಗುವ ಎಲ್ಲಾ ಅವಕಾಶಗಳಿವೆ ಎಂದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ಜಾಗೃತ ದಳದ ಅಧಿಕಾರಿ ಉಲ್ಪತ್ ಜಿಸ್ಮಾ, ಮಾರಾಟಗಾರರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಮಂಜುನಾಥ ಮುಂತಾದವರು ಭಾಗವಹಿಸಿದ್ದರು.