ಸಾರಾಂಶ
ಅಳ್ನಾವರ: ರೈತರಿಗೆ ಯಾವುದೇ ತರಹದ ತೊಂದರೆ ಆಗದ ಹಾಗೆ ಬೀಜ ಹಾಗೂ ರಸ ಗೊಬ್ಬರ ವಿತರಣೆ ಮಾಡಬೇಕು. ರೈತರಿಗೆ ತೂಕ ಹಾಗೂ ದರದಲ್ಲಿ ಮೋಸ ಆಗಕೂಡದು, ಸರ್ಕಾರ ನಿಗದಿ ಮಾಡಿದ ದರದಲ್ಲಿಯೇ ಗೊಬ್ಬರ ವಿತರಿಸಬೇಕು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.
ಪಟ್ಟಣದ ವಿವಿಧ ಗೊಬ್ಬರ, ಬೀಜ ಮಾರಾಟ ಹಾಗೂ ದಾಸ್ತಾನು ಕೇಂದ್ರಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಅವರು ಮಾತನಾಡಿದರು.ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಬೀಜ ಮತ್ತು ಗೊಬ್ಬರ ಮಾರಾಟ ಬಗ್ಗೆ ನಿಗಾ ವಹಿಸಲು ರಚಿಸಿದ ತಾಲೂಕು ಮಟ್ಟದ ಜಾರಿದಳ ಸಮಿತಿ ಸದಸ್ಯರ ಜತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮಾರಾಟಗಾರರು ಗೊಬ್ಬರ ಹಾಗೂ ಬೀಜದ ದರ ಮತ್ತು ದಾಸ್ತಾನು ಬಗ್ಗೆ ನಾಮಫಲಕದಲ್ಲಿ ಸರಿಯಾಗಿ ನಮೂದು ಮಾಡಬೇಕು. ಗೊಬ್ಬರ ನೀಡಿದ ಬಗ್ಗೆ ಅಧಿಕೃತ ರಶೀದಿ ನೀಡಬೇಕು. ತೂಕದಲ್ಲಿ ವಂಚನೆ ಮಾಡಬಾರದು. ಸಮಯಕ್ಕೆ ಸರಿಯಾಗಿ ರೈತರಿಗೆ ಗೊಬ್ಬರ ದೊರೆಯಬೇಕು. ಅನಗತ್ಯವಾಗಿ ಅಲೆದಾಡಿಸಬಾರದು. ದಾಸ್ತಾನು ಹಾಗೂ ಮಾರಾಟದ ಬಗ್ಗೆ ಸರಿಯಾದ ದಾಖಲೆ ಇಟ್ಟುಕೊಳ್ಳಬೇಕು. ಯುರಿಯಾ ಜತೆ ಬೇರೆ ಗೊಬ್ಬರ ಪಡೆಯಲು ಒತ್ತಾಯ ಮಾಡಬಾರದು ಎಂದು ಮಾರಾಟಗಾರರಿಗೆ ಸೂಚನೆ ನೀಡಿದರು.ನಂತರ ಅವರು ಗೊಬ್ಬರ ಖರೀದಿಗೆ ಬಂದ ರೈತರೊಂದಿಗೆ ತುಸು ಹೊತ್ತು ಸಂವಾದ ನಡೆಸಿ ಮಳೆ, ಬೆಳೆ, ಬೀಜ ಹಾಗೂ ಗೊಬ್ಬರ ಬಳಕೆ ಬಗ್ಗೆ ಮಾಹಿತಿ ಪಡೆದರು. ರೈತರು ತಮ್ಮ ಹೊಲದಲ್ಲಿನ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಅತೀಯಾದ ರಸಗೊಬ್ಬರ ಬಳಕೆ ಮಾಡಬೇಡಿ, ಮಣ್ಣಿನ ಫಲವತ್ತತೆ ಕಾಪಾಡಲು ಆದ್ಯತೆ ನೀಡಿ, ಯುರಿಯಾ ಗೊಬ್ಬರ ಹೆಚ್ಚು ಬಳಸದೆ ಅದಕ್ಕೆ ಪರ್ಯಾಯ ಗೊಬ್ಬರ ಹಾಕಲು ಒಲವು ತೋರಬೇಕು. ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಕೃಷಿ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಳ್ನಾವರ ಭಾಗದಲ್ಲಿ ಕಳೆದ ಹಲವು ದಿನದಿಂದ ಬಿಟ್ಟು ಬಿಡದೆ ಸುರಿದ ಮಳೆಗೆ ಗೋವಿನ ಜೋಳ ಫಸಲಿಗೆ ಹಾನಿಯಾಗಿದೆ, ಅಲ್ಲಲ್ಲಿ ಕೆಂಪು ಬಣ್ಣದಿಂದ ಬೆಳೆ ಬಂದಿದೆ ಹಾಗೂ ಯುರಿಯಾ ಗೊಬ್ಬರ ಬಳಕೆ ಬಗ್ಗೆ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಿ ಎಂದರು.ಕೃಷಿ ಅಧಿಕಾರಿ ಗುರುಪ್ರಸಾದ ಹಿರೇಮಠ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುನಿಲ್ ಬನ್ನಿಗೋಳ, ತೋಟಗಾರಿಕೆ ಇಲಾಖೆಯ ಸಹಾಯಕಿ ದೀಪ್ತಿ ವಾಲಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಅನಿತಾ ಬಾಗೋಜಿ, ಪಿಎಸ್‌ಐ ಬಸವರಾಜ ಎದ್ದಲಗುಡ್ಡ ಸೇರಿದಂತೆ ಹಲವರಿದ್ದರು.