ಸಾರಾಂಶ
- ಧಾರವಾಡದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಕನ್ನಡಪ್ರಭ ವಾರ್ತೆ ಧಾರವಾಡ
ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹತ್ತು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಗ್ಯಾಸ್ ಸಿಂಲಿಂಡರ್ ವಿತರಣೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿಯ ಹೆಬ್ಬಳ್ಳಿ ಅಗಸಿ ಹತ್ತಿರದ ಮಣಿಕಂಠ ನಗರದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಭಾರತ ದೇಶವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತು ಇಲ್ಲಿನ ಜನರ ಜೀವನವನ್ನು ಸುಧಾರಿಸಿ, ಅವರ ಬದುಕಲ್ಲಿ ಪರಿವರ್ತನೆ ತರುವ ದೃಷ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಬಡ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ವಿತರಣೆ, ಉಜ್ವಲಾ ಯೋಜನೆಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, ಪ್ರತಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಧಾನ ಮಂತ್ರಿ ಪೋಷಣ ಅಭಿಯಾನ, ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ ಮಾನ್ ಭಾರತ ಕಾರ್ಡ್, ಆಧಾರ ಕಾರ್ಡ್ ಸೇವೆ, ಮುದ್ರಾ, ಸ್ವನಿಧಿ ಯೋಜನೆ, ಕಿಸಾನ್ ಸಮ್ಮಾನ, ವಿಶ್ವಕರ್ಮ ಯೋಜನೆ ಮತ್ತು ಪ್ರಧಾನ ಮಂತ್ರಿಯವರ ಆವಾಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.ಮೊದಲು ಭಾರತ ದೇಶವನ್ನು ಐದು ಅತೀ ದುರ್ಬಲ, ಆರ್ಥಿಕವಾಗಿ ಹಿಂದುಳಿದ ದೇಶ ಏನ್ನುತ್ತಿದ್ದರೆಲ್ಲರೂ ಈಗ ಇಂಗ್ಲೆಂಡನ್ನು ಹಿಂದಿಕ್ಕಿ ಆರ್ಥಿಕವಾಗಿ ಭಾರತ ದೇಶ ಐದು ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2024ರ ವೇಳೆಗೆ ಮೂರನೇ ಅತೀ ಹೆಚ್ಚು ಆರ್ಥಿಕವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸುವ ಗುರಿ ಹೊಂದಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಉಜ್ವಲಾ ಗ್ಯಾಸ್ ಸಿಲಿಂಡರ್ ವಿತರಿಸಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನೋಡಲ್ ಅಧಿಕಾರಿ ಮುರಳೀಧರ ಕಾರಭಾರಿ ಭಾರತವನ್ನು 2047ರ ವೇಳೆಗೆ ಅಭಿವೃದ್ದಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕುರಿತು ಪ್ರತಿಜ್ಞಾ ವಿಧಿ ಭೋದಿಸಿದರು ಮತ್ತು ಸಚಿವರಿಂದ ಯೋಜನೆಗಳ ಮಾಹಿತಿವುಳ್ಳ 2024ರ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿಸಿದರು.ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಮಹಾನಗರ ಪಾಲಿಕೆ ಸದಸ್ಯರಾದ ವೀರೇಶ ಅಂಚಟಗೇರಿ, ರತ್ನಾ ಬಾಯಿ ನಾಜರೆ ಮತ್ತು ಅನಿತಾ ಚಳಗೇರಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಎಸ್.ಬಿ.ಐ, ಮ್ಯಾನೇಜರ್ ಜಿತೇಂದ್ರ ಯಾದವ ಇದ್ದರು.