ಸಾರಾಂಶ
ಕಷಾಯದ ಜೊತೆಗೆ ವಿಶೇಷವಾಗಿ ಸೀತಾಳೆ ಸಸ್ಯದ ತಿರುಳು ಪನೊಲಿ ಬಂದವನ್ನು ಬಳಸಿ ಹಾಲು ಗಂಜಿಯನ್ನು ತಯಾರಿಸಿ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಆಟಿ ಅಮವಾಸ್ಯೆಯ ಪ್ರಯುಕ್ತ ಉಡುಪಿ ತುಳುಕೂಟದ ಹಾಗು ಲಯನ್ಸ್ ಕ್ಲಬ್ ಇಂದ್ರಾಳಿಯ ಸಹಯೋಗದೊಂದಿಗೆ, ಇಂದ್ರಾಳಿಯ ಜಯಸಿಂಹ ಸಭಾಭವನದಲ್ಲಿ ಭಾನುವಾರ ಸಾರ್ವಜನಿಕರಿಗೆ ಆಟಿದ ಪಾಲೆ ಕಷಾಯ ವಿತರಿಸಲಾಯಿತು. ನಾಟಿವೈದ್ಯ ಸತೀಶ್ ಮುದ್ದು ಶೆಟ್ಟಿಗಾರ್ ದಂಪತಿ ಪಾಲ ಮರದ ಕೆತ್ತೆಯ ಕಷಾಯವನ್ನು ಕ್ರಮಬದ್ಧ ರೀತಿಯಲ್ಲಿ ಸಿದ್ಧಪಡಿಸಿ ಅದನ್ನು ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿ ವಿತರಿಸಿದರು. ಕಷಾಯದ ನಂತರ ಬೆಲ್ಲದ ಬದಲಿಗೆ ಜಾರಿಗೆ ಹುಳಿಯನ್ನು ಚೀಪಿ ತಿನ್ನುವ ಮರೆತು ಹೋದ ಸಾಂಪ್ರದಾಯಿಕ ಕ್ರಮವನ್ನು ಈ ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳಲಾಗಿತ್ತು. ಕಷಾಯದ ಜೊತೆಗೆ ವಿಶೇಷವಾಗಿ ಸೀತಾಳೆ ಸಸ್ಯದ ತಿರುಳು ಪನೊಲಿ ಬಂದವನ್ನು ಬಳಸಿ ಹಾಲು ಗಂಜಿಯನ್ನು ತಯಾರಿಸಿ ವಿತರಿಸಲಾಯಿತು. ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಪ್ರೊ.ಕೃಷ್ಣಯ್ಯ ಎಸ್ಎ ಈ ಬಗ್ಗೆ ಮಾಹಿತಿ ನೀಡಿದರು.ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಲಯನ್ಸ್ ಇಂದ್ರಾಳಿಯ ಅಧ್ಯಕ್ಷ ಲಕ್ಷ್ಮಿಕಾಂತ್ ಬೆಸ್ಕೂರು, ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ತುಳು ಕೂಟದ ಸದಸ್ಯರು ಇದ್ದರು.