ಕಡಿಮೆ ಬೆಲೆಗೆ ಭಾರತ್ ಅಕ್ಕಿ, ಬೇಳೆ ವಿತರಣೆ

| Published : Oct 24 2024, 12:48 AM IST

ಸಾರಾಂಶ

ದೆಹಲಿ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ ಕೆಜಿಗೆ ₹ 70, ಭಾರತ್ ಹೆಸರುಬೇಳೆ ಕೆಜಿಗೆ ₹ 107 ಮತ್ತು ಭಾರತ್ ತೊಗರಿಬೇಳೆ ಕೆಜಿಗೆ ₹ 89 ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಹುಬ್ಬಳ್ಳಿ:

ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಎಂಆರ್‌ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ ಕಾಳು ವಿತರಿಸಲು ಮುಂದಾಗಿದೆ.

ನವದೆಹಲಿಯಲ್ಲಿ ಎಂಆರ್‌ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ ಕಾಳು ಪೂರೈಕೆಗೆ ಕ್ರಮಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ ಕಾಳನ್ನು ವಾಹನಗಳ ಮೂಲಕ ವಿತರಿಸಲು ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಬುಧವಾರ ನವದೆಹಲಿಯ ಕೃಷಿ ಭವನದಲ್ಲಿ ಕಡಿಮೆ ದರದಲ್ಲಿ ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ದೆಹಲಿ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ ಕೆಜಿಗೆ ₹ 70, ಭಾರತ್ ಹೆಸರುಬೇಳೆ ಕೆಜಿಗೆ ₹ 107 ಮತ್ತು ಭಾರತ್ ತೊಗರಿಬೇಳೆ ಕೆಜಿಗೆ ₹ 89 ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಕೈಗೊಂಡ ಈ ಯೋಜನೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಆಹಾರ ಧಾನ್ಯ, ಬೇಳೆ ಕಾಳು ಬೆಲೆ ಹೊರೆ ಕಡಿಮೆ ಮಾಡುವ ಗುರಿ ಹೊಂದಿದೆ ಎಂದರು.

ಈ ವೇಳೆ ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ಹಾಗೂ ನಿಮುಬೇನ್ ಬಂಭಾನಿಯಾ ಸೇರಿದಂತೆ ಹಲವರಿದ್ದರು.