ಮಾಧ್ಯಮಗಳು ಸಮಾಜ ಮತ್ತು ಸರ್ಕಾರದ ಸೇತುವೆಯಂತೆ

| Published : Jul 02 2024, 01:38 AM IST

ಸಾರಾಂಶ

ಸಮಾಜವನ್ನು ರಕ್ಷಿಸುವ ಹಾಗೂ ಸಾರ್ವಜನಿಕರನ್ನು ಜಾಗೃತಿಯನ್ನಾಗಿಸುವ ಅನೇಕ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಎಂ.ಜಿ. ರಸ್ತೆಯ ಸಿ.ಎಸ್.ಐ ಬಾಯ್ಸ್ ಬೋರ್ಡಿಂಗ್ ಹೋಮ್ ನ ವಿದ್ಯಾರ್ಥಿಗಳಿಗೆ ಎಸ್. ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪುಸ್ತಕ, ಲೇಖನಿ ಸಾಮಗ್ರಿಗಳು ಹಾಗೂ ಹಣ್ಣುಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಸಮಾಜವನ್ನು ರಕ್ಷಿಸುವ ಹಾಗೂ ಸಾರ್ವಜನಿಕರನ್ನು ಜಾಗೃತಿಯನ್ನಾಗಿಸುವ ಅನೇಕ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಂಗದ ಜೊತೆಯಲ್ಲೇ ಪತ್ರಿಕಾರಂಗವು ಬಹುಮುಖ್ಯ. ಮಕ್ಕಳಿಗೆ ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ನಾಡಿನ, ಜಿಲ್ಲೆಯ, ರಾಷ್ಟ್ರದ ಸುದ್ದಿ ಸಮಾಚಾರಗಳನ್ನು, ಕ್ರೀಡೆ, ಸಂಗೀತ, ಇನ್ನು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಉತ್ತಮವಾಗಿ ಓದಿ ಸಮಾಜಕ್ಕೆ ಒಳ್ಳೆಯ ಗಣ್ಯ ವ್ಯಕ್ತಿಗಳಾಗಬೇಕು ಎಂದರು.

ಈ ವೇಳೆ ಪತ್ರಿಕಾ ಸಂಪಾದಕರು, ವರದಿಗಾರರು, ಪತ್ರಿಕಾ ವಿತರಕರು ಪತ್ರಿಕೋದ್ಯಮದ ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯ ತಿಳಿಸಿದರು.

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಎಸ್. ಹೋಮದೇವ ಮಾತನಾಡಿ, ಪತ್ರಿಕೆಗಳು ಜಾರಿಗೆ ಬಂದ ದಿನ, ಪತ್ರಿಕೆಗಳು ಹುಟ್ಟಿದ ದಿನ ತಿಳಿದುಕೊಳ್ಳಬೇಕು. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ತಿಳಿದುಕೊಂಡು ಉತ್ತಮ ನಡತೆಯುಳ್ಳವರಾಗಬೇಕು. ಉತ್ತಮ ಅಧಿಕಾರಿಗಳಾಗಿ, ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿ, ಡಾಕ್ಟರ್ ಗಳಾಗಿ, ಎಂಜಿನಿಯರ್ ಗಳಾಗಬೇಕಾದರೆ ಬುದ್ಧಿ, ತಿಳುವಳಿಕೆ, ಜ್ಞಾನವೇ ಮುಖ್ಯ. ಈ ಜ್ಞಾನಾರ್ಜನೆ ಆಗಬೇಕಾದರೆ ವಿದ್ಯಾರ್ಥಿಗಳಾದ ತಾವುಗಳು ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸುಬ್ರಮಣಿ, ಛಾಯಾ, ಯಶವಂತ್ ಕುಮಾರ್, ಮಹದೇವ್, ಮಹೇಶ್, ಚಂದ್ರಶೇಖರ್, ಎಸ್‌.ಪಿ. ಅಕ್ಷಯ ಪ್ರಿಯಾದರ್ಶನ್, ಸ್ವಾಮಿ, ಶ್ರೀಧರ್ ಮೊದಲಾದವರು ಇದ್ದರು.