ತರಬೇತಿ ಹೊಂದಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

| Published : Jun 13 2024, 12:54 AM IST

ಸಾರಾಂಶ

ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ, ಮೈಸೂರು ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಭಾರತ ಸರ್ಕಾರದ ಈ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು 1986ರಿಂದ ಪ್ರಾರಂಭಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ

ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತಾ ಸಚಿವಾಲಯ ಹಾಗೂ ಮೈಸೂರು ಜನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಅಂತರಸಂತೆಯಲ್ಲಿ ನಡೆದ ಅಂತರಸಂತೆ ಮತ್ತು ಹೊಸಹಳ್ಳಿ ಗ್ರಾಮಗಳಲ್ಲಿ ನಿರುದ್ಯೋಗ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಮತ್ತು ಜೂಟ್ ತರಬೇತಿ ಹೊಂದಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಅಂತರಸಂತೆ ಗ್ರಾಪಂ ಅಧ್ಯಕ್ಷೆ ರೇಖಾ ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.

ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ. ರಮೇಶ್ ಮಾತನಾಡಿ, ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ, ಮೈಸೂರು ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಭಾರತ ಸರ್ಕಾರದ ಈ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು 1986ರಿಂದ ಪ್ರಾರಂಭಗೊಳಿಸಲಾಗಿದೆ. ಈ ಯೋಜನೆಯ ಜರ್ಮನ್ ಹಾಗೂ ಜಪಾನ್ ದೇಶದಲ್ಲಿ ಅಳವಡಿಸಲಾಗಿದ್ದು, ಇಲ್ಲಿನ ಜನತೆ ಶೇ. 97ರಷ್ಟು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ. ಆದರೆ ಭಾರತ ದೇಶದಲ್ಲಿ ಶೇ. 9ರಷ್ಟು ಮಹಿಳೆಯರು ಇದರಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ, ಪದವಿ ಪಡೆದವರು ಮಾತ್ರ ಕೆಲಸಕ್ಕೆ ಹೋಗಬಹುದಾಗಿತ್ತು, ಆದರೆ ಈ ಕೌಶಲ್ಯ ಅಭಿವೃದ್ಧಿ ಪಡೆದವರು ಎಲ್ಲ ಕಡೆ ಕೆಲಸವನ್ನು ನಿರ್ವಹಿಸಬಹುದಾಗಿದೆ ನಮ್ಮ ಕಡೆಯಿಂದ ಹೊಲಿಗೆ ತರಬೇತಿ ಬ್ರಿಟಿಷಿಯನ್ ಎಂಬ್ರಾಯಿಡರಿ ಹಾಗೂ ಜೂಟ್ ತರಬೇತಿಗಳನ್ನು ನೀಡಲಾಗುತ್ತಿದೆ. ಸರ್ಕಾರವು ಈ ಸಂಬಂಧ ಮಹಿಳೆಯರಿಗೆ ಸಂಪೂರ್ಣವಾದ ಸಹಕಾರ ನೀಡಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂತರಸಂತೆ ಗ್ರಾಮ ಪಂಚಾಯತಿಯ ಪಿಡಿಓ ಸುರೇಶ ಮಾತನಾಡಿ ಮೈಸೂರಿನ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ವತಿಯಿಂದ ತಾಲೂಕಿನಲ್ಲಿ ಹಲವು ರೀತಿಯ ತರಬೇತಿಗಳನ್ನು ನೀಡಲಾಗುತ್ತಿದ್ದು ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಈ ಭಾಗದಲ್ಲಿ ಮಹಿಳೆಯರಿಗೆ ಹೆಚ್ಚು ತರಬೇತಿಯನ್ನು ನೀಡಿರುವುದು ತಮ್ಮೆಲ್ಲರಿಗೂ ಸಂತೋಷ ಉಂಟು ಮಾಡಿದೆ ಹಾಗೂ ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಕಲ್ಪಿಸಿದಂತಾಗಿದೆ ಅವರನ್ನು ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ಸಹಾಯಾಧಿಕಾರಿ ಸುರೇಶ್ ಕುಮಾರ್ , ವೃತ್ತಿ ಬೋಧಕಿ ಸವಿತಾ ರವಿಕುಮಾರ್, ಶಿಬಿರಾರ್ಥಿಗಳು ಭಾಗವಹಿಸಿದ್ದರು. ತರಬೇತಿ ಪಡೆದ 60 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.