ಮಾಗಡಿಯಲ್ಲಿ ರೈತರಿಗೆ ತೆಂಗಿನ ಸಸಿ ವಿತರಣೆ

| Published : Jun 22 2024, 12:57 AM IST / Updated: Jun 22 2024, 12:35 PM IST

ಸಾರಾಂಶ

ಮಾಗಡಿ: ರೈತರ ಆರ್ಥಿಕ ಸುಧಾರಣೆ ಮತ್ತು ಪರಿಸರ ಕಾಪಾಡುವ ಸಲುವಾಗಿ ರೋಟರಿಯಿಂದ ಉಚಿತವಾಗಿ ರೈತರಿಗೆ ತಲಾ 5 ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ರೋಟರಿಯನ್ ಕೆ.ಪಿ.ನಾಗೇಶ್ ಹೇಳಿದರು.

ಮಾಗಡಿ: ರೈತರ ಆರ್ಥಿಕ ಸುಧಾರಣೆ ಮತ್ತು ಪರಿಸರ ಕಾಪಾಡುವ ಸಲುವಾಗಿ ರೋಟರಿಯಿಂದ ಉಚಿತವಾಗಿ ರೈತರಿಗೆ ತಲಾ 5 ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ರೋಟರಿಯನ್ ಕೆ.ಪಿ.ನಾಗೇಶ್ ಹೇಳಿದರು.

ಪಟ್ಟಣದ ರೋಟರಿ ಕಚೇರಿಯಲ್ಲಿ ಲಕ್ಷ ಕಲ್ಪವೃಕ್ಷ ಕಾರ್ಯಕ್ರಮದಡಿ ರೈತರಿಗೆ ಉಚಿತ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರಗಳನ್ನು ಕಡಿಯುತ್ತಿರುವುದು, ಅರಣ್ಯ ನಾಶದಿಂದ ಪರಿಸರದ ಮೇಲೆ ಬಹಳಷ್ಟು ಹಾನಿಯುಂಟಾಗುತ್ತಿದೆ. ಮುಂದಿನ ದಿನಗಳಲ್ಲಿ "ನಮ್ಮ ನಡೆ ಹಳ್ಳಿ ಕಡೆ " ಎನ್ನುವಂತಾಗಿದೆ. 

ಪರಿಸರ ಸಂರಕ್ಷಿಸುವ ಸಲುವಾಗಿ ರೋಟರಿ ಸಂಸ್ಥೆಯಿಂದ ಕೋಟಿ ಕಲ್ಪವೃಕ್ಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು ಹೇಳಿದರು. ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಒಂದು ಲಕ್ಷ ತೆಂಗಿನ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಒಂದು ತೆಂಗಿನ ಮರ ನೆಟ್ಟರೆ ಅದು 5 ವರ್ಷದಲ್ಲಿ ಫಲ ನೀಡುತ್ತದೆ. ವರ್ಷಕ್ಕೆ 300 ತೆಂಗಿನಕಾಯಿ ಉತ್ಪತ್ತಿಯಾಗುತ್ತದೆ, ಇದರಿಂದ ರೈತರಿಗೆ ವರ್ಷಕ್ಕೆ ಒಂದು ಮರದಿಂದ 5 ಸಾವಿರ ಆದಾಯ ಬರುತ್ತದೆ. 

ಒಂದು ತೆಂಗಿನ ಮರ 70 ವರ್ಷ ಜೀವಿಸುವುದರಿಂದ 65 ವರ್ಷ ರೈತರಿಗೆ ನಿಶ್ಚಿತ ಆದಾಯ ದೊರಕುವುದರಿಂದ ರೈತರು ತೆಂಗಿನ ಮರಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಅದನ್ನು ಪೋಷಿಸಬೇಕು. ಇದರಿಂದ ಪರಿಸರಕ್ಕೆ ಬಹಳಷ್ಟು ಉಪಯೋಗವಾಗುತ್ತದೆ. ಚಳ್ಳಕೆರೆ ಬಳಿ ಪಾಳು ಬಿದ್ದಿದ್ದ 1500 ಎಕರೆ ಜಮೀನಿನಲ್ಲಿ ರೋಟರಿ ವತಿಯಿಂದ 3 ವರ್ಷಗಳಲ್ಲಿ ಅನೇಕ ವಿಧದ ಗಿಡಗಳನ್ನು ನೆಟ್ಟು ಪೋಷಿಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.

ರೋಟೇರಿಯನ್ ರವಿಶಂಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಬಡ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ಆ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಕಾಮಧೇನು ಯೋಜನೆಯನ್ನು ಪ್ರಾರಂಭಿಸಿ ಬಡ ಮಹಿಳೆಯರಿಗೆ ಸೀಮೆ ಹಸುಗಳನ್ನು ವಿತರಿಸಬೇಕು. ಹಾಲು ಉತ್ಪಾದನೆಯಿಂದ ಬಡ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು. 

ಸೀಮೆ ಹಸುವಿನ ಮೊದಲ ಹೆಣ್ಣು ಕರುವನ್ನು ಫಲಾನುಭವಿ ಮತ್ತೊಬ್ಬ ಬಡ ಫಲಾನುಭವಿಗಳಿಗೆ ನೀಡುವುದರ ಮೂಲಕ ಬಡ ಮಹಿಳೆಗೆ ಅನುಕೂಲ ಮಾಡಿಕೊಡಬೇಕು. ಮಾಗಡಿ ರೋಟರಿ ಸಂಸ್ಥೆ ವತಿಯಿಂದ ತಾಲೂಕಿನ 45 ಬಡ ಮಹಿಳೆಯರಿಗೆ ಹಸುಗಳನ್ನು ವಿತರಿಸಿದ್ದು ಇದರಿಂದ ಸ್ಪೂರ್ತಿಗೊಂಡ ಕೆಂಗೇರಿ ಕ್ಲಬ್‌ನವರು 5 ಹಸುಗಳನ್ನು ಮಾಗಡಿ ರೋಟರಿ ಮೂಲಕ ಬಡ ಮಹಿಳೆಯರಿಗೆ ವಿತರಿಸಿದ್ದಾರೆ ಎಂದು ಹೇಳಿದರು.

ರೋಟೇರಿಯನ್ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ 4 ವರ್ಷಗಳಲ್ಲಿ 85 ಸಾವಿರಕ್ಕೂ ಹೆಚ್ಚು ಹಣ್ಣಿನ ಸಸಿಗಳನ್ನು ತಾಲೂಕಿನ ವಿವಿಧ ಸರ್ಕಾರಿ ಶಾಲೆಯ ಕಾಂಪೌಂಡ್‌ಗಳಲ್ಲಿ, ಪೊಲೀಸ್ ಠಾಣೆಯ ಅವರಣ ಹಾಗೂ ಸರ್ಕಾರಿ ಜಾಗದಲ್ಲಿ ಮತ್ತು ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅವರಣದಲ್ಲಿ 10 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಾಗಡಿ ತಾಲೂಕು ರೋಟೇರಿಯನ್‌ಗಳಾದ ಹಾರೋಹಳ್ಳಿ ವಿನೋಧ್, ವಕೀಲ ಲಕ್ಷ್ಮೀಪ್ರಸಾದ್, ಎಂ.ಪಿ.ಗಣೇಶ್, ದಕ್ಷಿಣಾಮೂರ್ತಿ, ಡಾ.ಮಂಜುನಾಥ್ ಬೆಟಗೇರಿ, ಲ್ಯಾಬ್ಲೋಕೇಶ್, ವೇಣುಗೋಪಾಲ್, ಪ್ರಸಾದ್, ಜಯಶಂಕರ್, ತಿರುಮುರುಗನ್. ಮೋಹನ್, ಅಭಯ ಚಂದ್ರ, ವಿನೋದ್ ಇತರರು ಭಾಗವಹಿಸಿದ್ದರು.