ಸಾರಾಂಶ
ಸಂವಿಧಾನ ಅರಿವು ರಾಜ್ಯ ಸಂಚಾರ ತಂಡ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಜಸ್ಟೀಸ್ ಡಾ. ಎಚ್.ಎನ್. ನಾಗಮೋಹನದಾಸ ರಚಿಸಿದ ಸಂವಿಧಾನ ಓದು ಪುಸ್ತಕವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾ ಪತ್ರಿಕಾ ಭವನದ ಎದುರು ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕಾರವಾರ
ಸಂವಿಧಾನ ಅರಿವು ರಾಜ್ಯ ಸಂಚಾರ ತಂಡ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಜಸ್ಟೀಸ್ ಡಾ. ಎಚ್.ಎನ್. ನಾಗಮೋಹನದಾಸ ರಚಿಸಿದ ಸಂವಿಧಾನ ಓದು ಪುಸ್ತಕವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾ ಪತ್ರಿಕಾ ಭವನದ ಎದುರು ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಸಂವಿಧಾನ ಓದು ಪುಸ್ತಕವನ್ನು ಜಿಲ್ಲೆಯ ಎಲ್ಲಾ ತಾಲೂಕಿನ ಮಾಧ್ಯಮದವರಿಗೆ ನೀಡುವ ಈ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಚಾರ್ಯ ಡಾ. ಮಹೇಶ ಜಿ. ಗೋಳಿಕಟ್ಟೆ ಹಾಗೂ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ರಾಯನ್ ಫೆರ್ನಾಂಡೀಸ್ ಮಾಧ್ಯಮದ ಪ್ರತಿನಿಧಿಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿದರು.
ಸಂವಿಧಾನ ಅರಿವು ರಾಜ್ಯ ಸಂಚಾರ ಪ್ರಧಾನ ಸಂಚಾಲಕ ಕೆ.ರಮೇಶ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನ ಸಂರಕ್ಷಣಾ ಕಾರ್ಯಪಡೆ-ಕರ್ನಾಟಕ, ಸಂಗಾತಿ ರಂಗಭೂಮಿ ಅಂಕೋಲಾ ಇವರ ಸಾರಥ್ಯದಲ್ಲಿ ಸಂವಿಧಾನ ಅರಿವು ಸಂಚಾರ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾಥಿ-ಯುವಜನರು ಹಾಗೂ ಎಲ್ಲಾ ಸ್ತರದ ಜನ ಸಮುದಾಯಗಳಿಗೆ ಸಂವಿಧಾನ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಧ್ಯಮದವರಿಗೂ ಸಹ ಸಂವಿಧಾನ ಕುರಿತು ಮಾಹಿತಿ ಅಗತ್ಯವಿರುವುದರಿಂದ ಈ ಪುಸ್ತಕವನ್ನು ಜಿಲ್ಲೆಯ ಎಲ್ಲಾ ಮಾಧ್ಯಮದವರಿಗೆ ನೀಡಲು ಜಿಲ್ಲಾ ಕೇಂದ್ರದಿಂದ ಪ್ರಾರಂಭಿಸಲಾಗಿದೆ ಎಂದರು.ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ. ಹರಿಕಾಂತ ಹಾಗೂ ಮಾಧ್ಯಮ ಪ್ರತಿನಿಧಿಗಳು, ಸಂವಿಧಾನ ಅರಿವು ರಾಜ್ಯ ಸಂಚಾರದ ಸಂಯೋಜಕರಾದ ಮುರುಳಿಧರ ಎಸ್. ಬಂಟ, ಮನೀಷಾ ಸುಭಾಷ ನಾಯ್ಕ, ಸಫಿನಾ ಮುಲ್ಲಾ ಅನ್ವರ, ವಿನಾಯಕ ಶೆಟ್ಟಿ ಮತ್ತಿತರರು ಇದ್ದರು.