ಸಾರಾಂಶ
ಹಿರಿಯೂರು ತಾಲೂಕಿನ 115 ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ಸಾಯಿ ಮಾಯಿ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ 115 ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ಸಾಯಿ ಮಾಯಿ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.ಬೆಂಗಳೂರು ಮೂಲದ ಹೃದಯ ಸ್ಪಂದನ ಅಧೀನ ಸಂಸ್ಥೆಯಾದ ಸಾಯಿ ಮಾಯಿ ಟ್ರಸ್ಟ್ ವತಿಯಿಂದ ತಾಲೂಕಿನ 115 ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ 5600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ
90,000 ನೋಟು ಪುಸ್ತಕಗಳು, ಪಠ್ಯಪುಸ್ತಕಗಳು, ಚಿತ್ರಕಲೆ ಪುಸ್ತಕಗಳು, ಗ್ರಾಫ್ ಪುಸ್ತಕಗಳು, ಗಣಿತ ಕೋಷ್ಠಕಗಳು 80,000ಕ್ಕೂ ಹೆಚ್ಚು ಲೇಖನಿ ಸಾಮಗ್ರಿಗಳಾದ ಪೆನ್, ಪೆನ್ಸಿಲ್, ಜಿಯೋಮೆಟ್ರಿ ಬಾಕ್ಸ್, ರುಲರ್, ಶಾರ್ಪನರ್, ಸ್ಕೆಚ್ ಪೆನ್ ಜತೆಗೆ 5,500 ಶಾಲಾ ಬ್ಯಾಗ್‌ಗಳು, 5,500 ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದರ ಜತೆಗೆ, ಮಕ್ಕಳ ದಂತ ಆರೋಗ್ಯ ಸ್ವಚ್ಛತಾ ಕಿಟ್ ವಿತರಿಸಲಾಯಿತು.ಸಮಾನ ಶಿಕ್ಷಣದ ಕನಸನ್ನು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಪ್ರಯತ್ನವಾಗಿ ಶಿಕ್ಷಾ ಸೇತು ಸೇವಾ ಯೋಜನೆಯನ್ನು ಬೆಂಗಳೂರು ಮೂಲದ ಸಂಸ್ಥೆಯಾದ ಹೃದಯ ಸ್ಪಂದನ ಸಂಸ್ಥೆಯ ಅಧೀನ ಸಂಸ್ಥೆಯ 70ಕ್ಕೂ ಹೆಚ್ಚು ಸ್ವಯಂ ಸೇವಕರು, 9 ತಂಡಗಳ ಮೂಲಕ ಎಲ್ಲಾ 115 ಶಾಲೆಗಳಿಗೆ ತಲುಪಿ 5600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರಿಕರಗಳನ್ನು ವಿತರಿಸಿದರು.
ಈ ವೇಳೆ ಸಾಯಿ ಮಾಯಿ ಟ್ರಸ್ಟ್ ನ ಸಾಯಿರಾ ಹರಿಶಂಕರ್ ಮಾತನಾಡಿ, ನಮ್ಮ ಉದ್ದೇಶ ಗ್ರಾಮಾಂತರ ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಧೈರ್ಯದಿಂದ ಎದುರಿಸಲು ಶಕ್ತಿ ತುಂಬುವುದಾಗಿದೆ. ಅದು ಬಹಳ ಅವಶ್ಯಕವಾಗಿದ್ದು ಆ ನಿಟ್ಟಿನಲ್ಲಿ ಈ ಯೋಜನೆ ಸಾರ್ಥಕ ಹೆಜ್ಜೆಯಾಗಿದೆ ಎಂದರು.ಎವಿಎಸ್ಎಸ್ ಪ್ರಸಾದ್ ಮಾತನಾಡಿ, ಈ ಸೇವಾ ಕಾರ್ಯವನ್ನು ಪ್ರತಿ ವರ್ಷವೂ ವಿದ್ಯಾಸೇವೆಯ ಮನೋಭಾವದಿಂದ ಮುಂದುವರಿಸಲು ನಾವು ಆಶಿಸುತ್ತೇವೆ ಎಂದರು.
ಈ ವೇಳೆ ಬೆಂಗಳೂರು ಮೂಲದ ಆಡಿಯೆನ್ಸ್ ಮತ್ತು ಆವೋ ಕಂಪೆನಿಯ ನೌಕರರು, ಶಿಕ್ಷಣ ಇಲಾಖೆಯ ಪ್ರಸನ್ನ, ಶಿಕ್ಷಕ ಜಗದೀಶ್, ಸಾಯಿ ಮಾಯಿ ಟ್ರಸ್ಟ್ ನ ಜಗದೀಶ ಕೆ.ಶೆಟ್ಟರ, ಶೈಲೇಶ, ಶ್ರೀನಿವಾಸ್ ಮತ್ತು ಗುರುರಾಜ ಹೆಬ್ಬಾರ್ ಸೇರಿದಂತೆ 70ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡಿದ್ದರು.