ಕನ್ನಡಪ್ರಭ ವಾರ್ತೆ ಸುತ್ತೂರು

ಎಚ್.ಡಿ. ಕೋಟೆ ತಾಲೂಕಿನ ಕೆಂಚನಹಳ್ಳಿಯಲ್ಲಿ ಸುತ್ತೂರಿನ ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ ಖೇತ್ ಬಚಾವೋ ಅಭಿಯಾನ ಹಾಗೂ ಸಸಿ ವಿತರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಕಡಿಮೆ ಮಳೆಯ ಪ್ರದೇಶಗಳಿಗೆ ಸೂಕ್ತವಾದ ಪರ್ಯಾಯ ಬೆಳೆಗಳ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು. ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಅರಿತು ಸಮತೋಲನ ಗೊಬ್ಬರ ಬಳಕೆ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಇಳುವರಿ ಹೆಚ್ಚಿಸಬಹುದು ಎಂದರು.

ಹವಾಮಾನ ವೈಪರೀತ್ಯ ಮತ್ತು ಮಳೆಯ ಅನಿಶ್ಚಿತತೆಯನ್ನು ಎದುರಿಸಲು ಒಣಭೂಮಿ ತೋಟಗಾರಿಕಾ ಬೆಳೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಬೆಂಗಳೂರು ಕೃಷಿ ಮಾರುಕಟ್ಟೆ ಮತ್ತು ಪರಿಶೀಲನಾ ನಿರ್ದೇಶನಾಲಯದ ಡಾ. ಶಿವಕುಮಾರ್ ಅವರು ಖೇತ್ ಬಚಾವೋ ಅಭಿಯಾನದ ಉದ್ದೇಶಗಳು ಹಾಗೂ ಪ್ರಸ್ತುತ ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಪುನಶ್ಚೇತನದ ಅಗತ್ಯತೆಯ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಮಣ್ಣಿನ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ವಿವರಿಸಿ, ರೈತರು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.


ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಎಂ. ವಿನಯ್ ಅವರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಮಹತ್ವವನ್ನು ವಿವರಿಸಿದರು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಾಗೂ ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಸಾವಯವ ಕೃಷಿ ಪದ್ಧತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಹಸಿರೆಲೆಗೊಬ್ಬರ ಬಳಕೆ, ಜೀವಾಮೃತ, ಘನ ಜೀವಾಮೃತ, ವರ್ಮಿಕಾಂಪೋಸ್ಟ್ ಹಾಗೂ ಇತರೆ ಸಾವಯವ ಪರಿಕರಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವ ಮೂಲಕ ದೀರ್ಘಕಾಲಿಕ ಉತ್ಪಾದಕತೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಬೆಣ್ಣೆಹಣ್ಣು ಮತ್ತು ಮಾವಿನ ಬೆಳೆ ಕೃಷಿ ಕುರಿತು ಮಾಹಿತಿ ತಿಳಿಸಿದರು.

ಡಾ.ಪ್ರಸಾದ್ ಅವರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಜೈವಿಕ ಶಿಲೀಂಧ್ರನಾಶಕಗಳ ಮಹತ್ವವನ್ನು ವಿವರಿಸಿದರು. ಟ್ರೈಕೊಡರ್ಮಾ, ಸ್ಯೂಡೋಮೊನಾಸ್ ಹಾಗೂ ಎಎಂಸಿ ಬಳಕೆಯಿಂದ ಮಣ್ಣಿನ ಆರೋಗ್ಯ ಸುಧಾರಣೆ, ಬೇರುಗಳ ಬೆಳವಣಿಗೆ ಹಾಗೂ ವಿವಿಧ ಮಣ್ಣಿನ ಮೂಲದ ರೋಗಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.

ವಿವಿಧ ಬೆಳೆಗಳಲ್ಲಿ ಇವುಗಳನ್ನು ಬಳಸುವ ವಿಧಾನಗಳ ಕುರಿತು ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಡೇನಿಯಸ್ ಮಾತನಾಡಿ, ಕೃಷಿಯಲ್ಲಿ ವಿಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು. ಕೃಷಿ ಕ್ಷೇತ್ರದಲ್ಲಿ ಸಂಶೋಧನಾ ಆಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ಯೋಜನೆಯಡಿ, ಒಣಭೂಮಿ ಹಾಗೂ ಕಡಿಮೆ ಮಳೆಯ ಪ್ರದೇಶಗಳಲ್ಲಿ ಹೊಸ ಹಣ್ಣಿನ ಬೆಳೆಗಳ ಉತ್ತೇಜನಕ್ಕಾಗಿ ರೈತರಿಗೆ ಉಚಿತವಾಗಿ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ವಿಶೇಷವಾಗಿ ಬೆಣ್ಣೆ ಹಣ್ಣು, ಅರ್ಕಾ ಸುಪ್ರೀಂ ತಳಿ ಹಾಗೂ ವಿವಿಧ ಉತ್ತಮ ತಳಿಯ ಮಾವಿನ ಸಸಿಗಳನ್ನು ರೈತರಿಗೆ ವಿತರಿಸಿ, ಪರ್ಯಾಯ ತೋಟಗಾರಿಕಾ ಬೆಳೆಗಳ ಅಳವಡಿಕೆಗೆ ಉತ್ತೇಜನ ನೀಡಲಾಯಿತು.

ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರಿಗೆ ಎಎಂಸಿ ಮತ್ತು ಟ್ರೈಕೊಡರ್ಮಾ ಜೈವಿಕ ಉತ್ಪನ್ನಗಳನ್ನು ಉಚಿತವಾಗಿ ವಿತರಿಸಲಾಯಿತು. ಇವುಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಸುಧಾರಿಸುವುದು, ಬೇರುಗಳ ಬೆಳವಣಿಗೆ ಹೆಚ್ಚುವುದು ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದು ಎಂದು ರೈತರಿಗೆ ವಿವರಿಸಲಾಯಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ಅಕ್ಷಯ್ ಹಾಗೂ ತಂಡದ ಸದಸ್ಯರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಮತ್ತು ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.