ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಸುರಕ್ಷತೆಗಾಗಿ ಮೊದಲ ಬಾರಿಗೆ ಮಾಡಿಸಿರುವ ವಿಮಾ ಬಾಂಡ್ ವಿತರಣೆ ಹಾಗೂ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಲಿದೆ.ನಗರದ ಎಂಜಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು, ಅಂದೇ ಸಂಘದಿಂದ ಹೊರತಂದಿರುವ ೨೦೨೫ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಕೆ. ಎಚ್.ವೇಣುಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ವಹಿಸುವರು. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಉದ್ಘಾಟನೆ ನೆರವೇರಿಸುವರು. ಕೆಯೂಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನಗೌಡ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ದಿಕ್ಸೂಚಿ ಮಾತುಗಳನ್ನಾಡುವರು ಎಂದು ತಿಳಿಸಿದರು.ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾದ ರವಿ ನಾಕಲಗೂಡು ಆಶಯನುಡಿಗಳನ್ನಾಡುವರು ಎಂದರು. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕರಾದ ಮೀನಾಕ್ಷಮ್ಮ ಮೊದಲಾದವರು ಭಾಗಿಯಾಗುವರು ಎಂದು ವಿವರಿಸಿದರು. ವಿಮಾ ಬಾಂಡ್ ವಿತರಣೆ ನಂತರ ಈ ಬಾರಿಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ.ಮದನಗೌಡರನ್ನು ಸಂಘದ ಪರವಾಗಿ ಅಭಿನಂದಿಸಲಾಗುವುದು ತಿಳಿಸಿದರು.
ನಗರ ಹಾಗೂ ಜಿಲ್ಲಾದ್ಯಂತ ನಮ್ಮ ಸಂಘದ ಸದಸ್ಯರಾಗಿರುವ ಒಟ್ಟು ೩೬೦ ಸದಸ್ಯರ ಪೈಕಿ ೨೮೦ ಮಂದಿ ಆರೋಗ್ಯ ವಿಮೆ ಮಾಡಿಸಿಕೊಂಡಿದ್ದು, ಅವರೆಲ್ಲರಿಗೂ ಬಾಂಡ್ ವಿತರಿಸಲಾಗುವುದು. ಉಳಿದವರಿಗೂ ಮುಂದಿನ ದಿನಗಳಲ್ಲಿ ವಿಮೆ ಮಾಡಿಸಲು ಪ್ರಯತ್ನಿಸಲಾಗುವುದು. ಹಾಗೆಯೇ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಮುಂದಿನ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಬಿ.ಸಿ. ಸುದ್ದಿಗೋಷ್ಠಿಯಲ್ಲಿದ್ದರು.-----------------------------------------------------------------
26ಎಚ್ಎಸ್ಎನ್3 : ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವೇಣುಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಶಿಧರ್ ಮಾತನಾಡಿದರು.