ಸಮುದಾಯದ ಸಮತೋಲನದ ಪ್ರಗತಿಗೆ ಅಗತ್ಯವಾಗಿರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಲೆಂಬ ಉದ್ದೇಶದಿಂದ ಕಲಿಕಾ ಪೂರಕ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣ ದಿವಾಕರ ಹೇಳಿದ್ದಾರೆ.

- ಅರುಣ ದಿವಾಕರ ಅಭಿಮತ । 15 ಸಾವಿರ ನೋಟ್ ಬುಕ್, 5 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಣೆ ಶ್ಲಾಘನೀಯ: ಶರಣಕುಮಾರ ಹೆಗಡೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಮುದಾಯದ ಸಮತೋಲನದ ಪ್ರಗತಿಗೆ ಅಗತ್ಯವಾಗಿರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಲೆಂಬ ಉದ್ದೇಶದಿಂದ ಕಲಿಕಾ ಪೂರಕ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣ ದಿವಾಕರ ಹೇಳಿದರು.

ನಗರದ ನಿವೃತ್ತ ನೌಕರರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ನಮ್ಮ ಸಂಸ್ಥೆಯಿಂದ ಕಲಿಕಾ ಸಾಮಗ್ರಿ ವಿತರಣೆ ಮಾಡಿದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳ ಆಗುತ್ತಿರುವ ಮಾಹಿತಿ ತಿಳಿದು ಸಂತಸವಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಆಗಲು ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಹೆಗಡೆ ಮಾತನಾಡಿ, ಈ ಸಂಸ್ಥೆಯಿಂದ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ 2500 ವಿದ್ಯಾರ್ಥಿಗಳಿಗೆ ತಲಾ 6ರಂತೆ 15 ಸಾವಿರ ನೋಟ್ ಬುಕ್ ಹಾಗೂ 5 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿರುವುದು ಸ್ಮರಣೀಯ ಕಾರ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ ಡಿ. ಮಾತನಾಡಿ, ಸರ್ಕಾರೇತರ ಸಂಘ, ಸಂಸ್ಥೆಗಳಂತೆಯೇ ತಾಲೂಕಿನ ಶಿಕ್ಷಕರ ಸೇವಾ ವೇದಿಕೆ ವತಿಯಿಂದಲೂ ತಾಲೂಕಿನ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಲವು ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಮಂಜಪ್ಪ ಬಿದರಿ ಮಾತನಾಡಿ, ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಈ ಹಿಂದೆಯೂ ತಾಲೂಕಿನ ಹತ್ತಾರು ಸರ್ಕಾರಿ ಶಾಲೆಗಳಿಗೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಿದೆ. ಇವರ ಬೆಂಬಲ ಹೀಗೆ ಮುಂದುವರಿಯಲಿ ಎಂದು ಹೇಳಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ವೀರಪ್ಪ ಬಿ.ಎನ್. ಮಾತನಾಡಿ, ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಗಳು ನೀಡುವ ದೇಣಿಗೆಯನ್ನು ಬಳಸಿ ಸರ್ಕಾರಿ ಶಾಲೆಗಳ ಸ್ಥಿತಿಗಳನ್ನು ಉತ್ತಮಗೊಳಿಸಲು ಶಿಕ್ಷಕರ ತಂಡ ಶ್ರಮಿಸುತ್ತಿದೆ ಎಂದರು.

ಶಿಕ್ಷಕರ ಪರವಾಗಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಶ್ಫಾಖ್ ಅಹಮದ್ ಹಾಗೂ ಜಯಶ್ರೀ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಭೀಮಪ್ಪ ಕಾಯಕದ, ಮಂಜುನಾಥ ಡಿ.ಎಂ., ಜ್ಯೋತಿ, ಮುಷ್ತಾಖ್ ಅಹ್ಮದ್, ಗುಲಾಬ್ ಜಾನ್, ಅಶೋಕ ಅರಳಿಕಟ್ಟೆ, ಚನ್ನಬಸಪ್ಪ, ಪರಶುರಾಮ್, ಪೀರು ನಾಯ್ಕ್, ಗಿರೀಶ್, ಪ್ರವೀಣ್ ಕುಮಾರ್, ಆನಂದ್ ಭೂತರೆಡ್ಡಿ, ಶಶಿಕುಮಾರ್, ರಾಘವೇಂದ್ರ ಎ.ಜಿ. ಭಾಗವಹಿಸಿದ್ದರು.

- - -

-08HRR.01:

ಹರಿಹರದಲ್ಲಿ ಸೋಮವಾರ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ನ ಮುಖ್ಯಸ್ಥೆ ಅರುಣ ದಿವಾಕರ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಕಲಿಕಾ ಪೂರಕ ಸಾಮಗ್ರಿಗಳನ್ನು ವಿತರಿಸಿದರು. ಬಿಇಒ ದುರ್ಗಪ್ಪ ಡಿ., ಶಿಕ್ಷಕರ ಸಂಘದ ಪದಾಧಿಕಾರಿಗಳಿದ್ದರು.