ಕನಕಪುರ: ತಾಲೂಕಿನ ಸಾತನೂರು ಹೋಬಳಿ ಹೊಸ ಕಬ್ಬಾಳು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಸಿ ನೆಡುವ ಮತ್ತು ವಿತರಣೆ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇಂಟರ್ ನ್ಯಾಷನಲ್ ಅಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪಠ್ಯ ಪರಿಕರಗಳ ವಿತರಣೆ ಮಾಡಿದ ಅಸೋಸಿಯೇಷನ್ ತಾಲೂಕು ಅಧ್ಯಕ್ಷೆ ಪವಿತ್ರ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಸೇರುವ ಬಡಮಕ್ಕಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವರ ಶ್ರೇಯೋಭಿವೃದ್ಧಿಗೆ ಅಗತ್ಯ ಮುಲಸೌಕರ್ಯ ಒದಗಿಸಿ ಕೊಟ್ಟಲ್ಲಿ ಓದಿನ ಕಡೆ ಹೆಚ್ಚಿನ ಗಮನ ಹರಿಸಲು ಸಹಾಯವಾಗುತ್ತದೆ ಎಂದರು.

ಶಾಲಾ ಮಕ್ಕಳ ಕಿರಿವಯಸ್ಸಿನಲ್ಲಿಯೇ ಅವರಿಗೆ ಪರಿಸರದ ಅರಿವು ನೀಡಿ, ಪರಿಸರ ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಸಸಿಗಳನ್ನು ನೀಡಲಾಗಿದೆ. ಪ್ರತಿ ವಿದ್ಯಾರ್ಥಿಯೂ ಅವರ ತಾಯಿಯವರ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜೆ.ಡಿ.ಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸದಿದ್ದರೆ, ಭವಿಷ್ಯದಲ್ಲಿ ಉತ್ತಮ ಪರಿಸರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಹಸಿರು ನಮ್ಮೆಲ್ಲರ ಉಸಿರಾಗಬೇಕು, ಶಾಲೆ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ಗಳನ್ನು ನೆಟ್ಟು ಪೋಷಿಸಬೇಕೆಂದು ಕಿವಿ ಮಾತು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವೇದಾವತಿ ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹಾಗೂ ಅವರ ಕಲಿಕೆಗೆ ಸಹಕಾರಿ ವಾಗುವಂತಹ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಫೌಂಡೇಷನ್ ವತಿಯಿಂದ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಮುಂದೆಯೂ ಸಹ ಗ್ರಾಮೀಣ ಶಾಲೆಗಳ ಮಕ್ಕಳ ಪ್ರಗತಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪದಾಧಿಕಾರಿಗಳು ಸಹಕರಿಸಬೇಕು ಎಂದರು.

ನ್ಯಾಷನಲ್ ಅಲಯನ್ಸ್ ಕ್ಲಬ್‌ ನ ಅಲೈ ವಿಜಯೇಂದ್ರ, ಕ್ಯಾಬಿನೆಟ್ ಕಾರ್ಯದರ್ಶಿ ವಿ.ವಿ.ಶಾಂತಾನು, ಜಿಲ್ಲಾಧ್ಯಕ್ಷ ಮಂಜುನಾಥ್, ಬೆಂಗಳೂರಿನ ಆಶಾ, ಎಚ್.ಎನ್. ನಿಶಾಂತ್, ಆರ್.ಸಿ.ವೀಣಾ, ಜೆ.ಡಿ.ಎಸ್ ಮುಖಂಡರಾದ ಕುರುಬಳ್ಳಿದೊಡ್ಡಿ ರಾಜೇಶ್, ಸ್ಟುಡಿಯೋ ಚಂದ್ರು, ರಾಜೇಂದ್ರ, ತಿಮ್ಮೇಗೌಡ ಮಳವಳ್ಳಿ ಹಾಗೂ ರಾಮನಗರ ಕ್ಲಬ್‌ಗಳ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.