ಸಂಘದ ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರ ಸಹಕಾರ ಪಡೆದು ಭವನ ನಿರ್ಮಿಸಲು ಉದ್ದೇಶಿಸಿರುವ ಜಾಗಕ್ಕೆ ಸಂಬಂಧಿಸಿದಂತೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ ಮುಂದಿನ ಎರಡು ವರ್ಷದಲ್ಲಿ ಹೊಸ ಭವನ ನಿರ್ಮಿಸಿ ಸಂಸ್ಥೆಯ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ರೈತರು ಮತ್ತು ರೈತ ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಎಂಡಿಸಿಸಿ ಬ್ಯಾಂಕ್ ವತಿಯಿಂದ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಳೆದ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಹಿರಿಯ ಸಹಕಾರಿ ಧುರೀಣರಾದ ಟಿ.ಎನ್.ಮಾದಪ್ಪಗೌಡ ಅವರು ಸ್ಥಾಪಿಸಿರುವ ಈ ಸಂಸ್ಥೆಯು ಉತ್ತಮ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಟಿಎಪಿಸಿಎಂಎಸ್ ಮತ್ತು ಎಂಡಿಸಿಸಿ ಬ್ಯಾಂಕ್ ನಡುವೆ ಉತ್ತಮ ಬಾಂಧವ್ಯವಿದೆ. ಎಂಡಿಸಿಸಿ ಬ್ಯಾಂಕ್ ಸದಾಕಾಲ ರೈತರ ಪರವಾಗಿದೆ. ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸಹಕಾರ ಸಂಘಗಳಲ್ಲಿ ಪಡೆಯುವ ಸಾಲವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಸಂಸ್ಥೆ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಜೊತೆಗೆ ಸಮುದಾಯ ಭವನ ನಿರ್ಮಿಸುವ ಉದ್ದೇಶದಿಂದ ಟಿ.ಬಿ.ಬಡಾವಣೆಯ ಹೇಮಾವತಿ ಬಡಾವಣೆಯಲ್ಲಿ 1.30 ಎಕರೆ ಜಾಗವನ್ನು ಜಿಲ್ಲಾ ಉಸ್ತುವಾರಿ ಸಚಿವರು ಗುರುತಿಸಿದ್ದಾರೆ. ಇದರಿಂದ ಸಂಸ್ಥೆ ಸದಸ್ಯರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ, ತಾಲೂಕಿನ ರೈತರ ಅನುಕೂಲಕ್ಕಾಗಿಯೇ ಕಳೆದ 75 ವರ್ಷಗಳ ಹಿಂದೆ ಸ್ಥಾಪಿತವಾಗಿರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಸದಸ್ಯರ ಸಹಕಾರದಿಂದ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಕಳೆದ ಸಾಲಿನಲ್ಲಿ ₹47 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದರು.

ರೈತರ ಪರ ಅಪಾರ ಕಾಳಜಿ ಹೊಂದಿದ್ದ ಹಿರಿಯ ಮುತ್ಸದ್ದಿ ಟಿ.ಎನ್.ಮಾದಪ್ಪಗೌಡರು ಈ ಸಂಸ್ಥೆಯನ್ನು ಸ್ಥಾಪಿಸಿರುವುದರಿಂದ ತಾಲೂಕಿನ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿರುವ ರೈತ ಸಭಾಂಗಣದ ಮಾದರಿಯಲ್ಲಿ ಪಟ್ಟಣದಲ್ಲಿಯೂ ಕೂಡ ಸುಸಜ್ಜಿತ ಭವನ ನಿರ್ಮಿಸಲು ಟಿಎಪಿಸಿಎಂಎಸ್ ಹೆಸರಿಗೆ ಅಗತ್ಯ ಜಾಗ ಮಂಜೂರು ಮಾಡಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೋರಿಕೊಂಡ ಹಿನ್ನೆಲೆ ಜಾಗ ಮಂಜೂರು ಮಾಡಿಸುವ ಜೊತೆಗೆ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನೂ ಸಹ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ ಎಂದರು.

ಸಂಘದ ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರ ಸಹಕಾರ ಪಡೆದು ಭವನ ನಿರ್ಮಿಸಲು ಉದ್ದೇಶಿಸಿರುವ ಜಾಗಕ್ಕೆ ಸಂಬಂಧಿಸಿದಂತೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಿ ಮುಂದಿನ ಎರಡು ವರ್ಷದಲ್ಲಿ ಹೊಸ ಭವನ ನಿರ್ಮಿಸಿ ಸಂಸ್ಥೆಯ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಸಂಘದ ಉಪಾಧ್ಯಕ್ಷ ಸಿ.ಧನರಾಜ್ ಸ್ವಾಗತಿಸಿದರೆ, ಕಾರ್ಯದರ್ಶಿ ಎಂ.ಕೆ.ಮೋಹನ್‌ರಾಜ್ ಕಳೆದ ಸಾಲಿನ ಆಡಳಿತ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಕಳೆದ ಸಾಲಿನ ಜಮಾ ಖರ್ಚು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು. ಪ್ರಸಕ್ತ ಸಾಲಿಗೆ ನಿಗಧಿ ಪಡಿಸಿದ್ದ ₹1.79 ಕೋಟಿ ಅಂದಾಜು ಬಡ್ಜೆಟ್‌ಗೆ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎನ್.ಟಿ.ಕೃಷ್ಣಮೂರ್ತಿ, ಎ.ಕುಮಾರ್, ಮರೀಗೌಡ, ಡಿ.ಕೃಷ್ಣೇಗೌಡ, ಲಕ್ಷ್ಮಣಗೌಡ, ಸುರೇಂದ್ರಕುಮಾರ್, ಎನ್.ಕೆ.ವಸಂತಮಣಿ, ಜೆ.ಆಶಾ, ಎನ್.ಉಜ್ವಲ, ಗೀತಾ ದಾಸೇಗೌಡ, ಕೆ.ವಿ.ದಿನೇಶ್, ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ ಸೇರಿದಂತೆ ಸಾವಿರಕ್ಕೂ ಹೆಚ್ಚುಮಂದಿ ಸದಸ್ಯರು ಹಾಜರಿದ್ದರು.