ತಾಲೂಕಿನ ಊರುಕೆರೆ ಗ್ರಾಮದಲ್ಲಿ ಶನಿವಾರ ಬಡತನ ರೇಖೆಗಿಂತ ಕೆಳಗಿರುವ ಅರ್ಹ ೧೦ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರುತಾಲೂಕಿನ ಊರುಕೆರೆ ಗ್ರಾಮದಲ್ಲಿ ಶನಿವಾರ ಬಡತನ ರೇಖೆಗಿಂತ ಕೆಳಗಿರುವ ಅರ್ಹ ೧೦ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಯಿತು. ಜಿಲ್ಲಾಡಳಿತ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಪಡಿತರ ಚೀಟಿದಾರರು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಅನರ್ಹರು ಬಿಪಿಎಲ್ಪ ಡಿತರ ಚೀಟಿ ಹೊಂದಿದ್ದಲ್ಲಿ ತಾವಾಗಿಯೇ ಎಪಿಎಲ್ಪ ಡಿತರ ಚೀಟಿಗಳನ್ನಾಗಿ ಬದಲಾಯಿಸಿಕೊಳ್ಳಲು ಸಲಹೆ ನೀಡಿದರು. ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಅನ್ನ ಸುವಿಧ ಯೋಜನೆಯಡಿ ಪಿಹೆಚ್‌ಹೆಚ್ ಪಡಿತರ ಚೀಟಿ ಹೊಂದಿರುವ 75 ವರ್ಷದ ಮೇಲ್ಪಟ್ಟ ಏಕ ಸದಸ್ಯರಿರುವ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ಧಾನ್ಯ ವಿತರಿಸಲು ಅರ್ಹ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರನ್ನು ನಿಗದಿತ ಅವಧಿಯಲ್ಲಿ ನೋಂದಾಯಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದ ಅವರು, ಊರುಕೆರೆ ಗ್ರಾಮದ ೭೫ ವರ್ಷ ಮೆಲ್ಪಟ್ಟ ನರಸಮ್ಮ ಮತ್ತು ಪಾರ್ವತಮ್ಮ ಎಂಬುವರ ಮನೆಗೆ ತೆರಳಿ ಪಡಿತರಧಾನ್ಯ ವಿತರಿಸಿದರಲ್ಲದೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.
ತುಮಕೂರು ತಾಲೂಕು ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, ವಯೋವೃದ್ಧರಿಗೆ, ಹಾಸಿಗೆ ಹಿಡಿದಿರುವ ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಬಹುದಾಗಿದ್ದು, ಇದರ ಸದುಪಯೋಗ ಪಡೆಯಲು ಸಲಹೆ ನೀಡಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಲು ಆಹಾರ ನಿರೀಕ್ಷಕರಿಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಊರುಕೆರೆ ಗ್ರಾಮದ ಕರಿಯಮ್ಮ, ಭಾಗ್ಯ, ಸುರೇಖಾ ಹಾಗೂ ಗೀತಾ ಹೆಬ್ಬಾಕ ಗ್ರಾಮದ ಮಹಾದೇವಮ್ಮ ಹಾಗೂ ಮಂಜಮ್ಮ; ನರಸಾಪುರ ಗ್ರಾಮದ ಎನ್.ಎಸ್ ಗೀತಾ ಹಾಗೂ ಲಕ್ಷ್ಮಿ ಎ, ಮರಿಯಪ್ಪನ ಪಾಳ್ಯದ ತಾರಾ ಎಚ್.ಎಲ್, ಅನ್ನೇನಹಳ್ಳಿಯ ಶಿಲ್ಪ ಅವರಿಗೆ ಹೊಸದಾಗಿ ಪಡಿತರ ಚೀಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ವಿಎಸ್‌ಎಸ್‌ಎಸ್‌ಎನ್ ಊರುಕೆರೆ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರುಕೆರೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ನ್ಯಾಯಬೆಲೆ ಅಂಗಡಿಗಳ ಮಾಲೀಕರು/ಕಾರ್ಯದರ್ಶಿಗಳು ಹಾಜರಿದ್ದರು.
ಪೋಟೋ :