ವಿಷಪ್ರಾಶನ ಸಂತ್ರಸ್ಥರಿಗೆ ಪೌಷ್ಠಿಕ ಆಹಾರ ವಿತರಣೆ

| Published : May 23 2024, 01:05 AM IST

ಸಾರಾಂಶ

ತಾಲೂಕಿನ ಸುಳ್ವಾಡಿ ಕಿಚ್‌ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಪ್ರಕರಣದಲ್ಲಿ ಭಾದಿತರಾಗಿರುವ ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಸುಳ್ವಾಡಿ ಕಿಚ್‌ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಪ್ರಕರಣದಲ್ಲಿ ಭಾದಿತರಾಗಿರುವ ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಕಿಚ್‌ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಾಶನ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾತನಾಡಿದರು.

ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಕಿಚ್ ಗುತ್ತಿ ಮಾರಮ್ಮ ದೇವಸ್ಥಾನದಲ್ಲಿ 2018ರ ಡಿಸೆಂಬರ್ ತಿಂಗಳಿನಲ್ಲಿ ವಿಷಪ್ರಾಶನ ಪ್ರಸಾದ ಸ್ವೀಕರಿಸಿ 17 ಜನ ಮೃತಪಟ್ಟಿದ್ದರು. ಇದಲ್ಲದೆ ನೂರಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಈ ವೇಳೆ ಮೃತ ಕುಟುಂಬಗಳಿಗೆ ಹಾಗೂ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಪರಿಹಾರ ವಿತರಣೆ ಮಾಡಲಾಗಿತ್ತು.

ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಗ್ರಾಮಗಳಿಗೆ ಬಂದಿರುವ ನೂರಾರು ಜನರು ಇನ್ನೂ ಕೂಡ ನಿಶಕ್ತಿಯಿಂದ ಬಳಲುತ್ತಿದ್ದು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ತಿಂಗಳು ವೈದ್ಯಕೀಯ ಶಿಬಿರಗಳನ್ನು ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಸಹ ಚೇತರಿಸಿಕೊಳ್ಳದೆ ಇರುವುದರಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಆದಿವಾಸಿ ಕುಟುಂಬಗಳಿಗೆ ಸರ್ಕಾರ ನೀಡುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ವಿಷ ಪ್ರಸಾದ ಭಾದಿತರಿಗೂ ನೀಡಬೇಕು ಎಂಬ ನಿಟ್ಟಿನಲ್ಲಿ 110 ಕುಟುಂಬಗಳಿಗೂ ಪೌಷ್ಟಿಕ ಆಹಾರ ವಿತರಣೆ ಮಾಡಿದ್ದೇವೆ.

ಸಂತ್ರಸ್ತರ ಮೇಲೆ ಜಿಲ್ಲಾಧಿಕಾರಿಗಳಿಗೆ ಅಪಾರ ಪ್ರೀತಿ, ಕಾಳಜಿ ಇದ್ದು ಪುನರ್ವಸತಿ ಯೋಜನೆ ಕಲ್ಪಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಭಾದಿತರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಗುಣಮಟ್ಟ, ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಂಡಿದ್ದಾರೆ. ಹಲವು ತಿಂಗಳುಗಳ ಕಾಲ ಭಾದಿತರಿಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಷ ಪ್ರಾಶನ ಪ್ರಕರಣದಲ್ಲಿ ಮೃತಪಟ್ಟ ಪರಿಶಿಷ್ಟ ಜಾತಿಯ 11 ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದ್ದು ಮಾಸಿಕ ಪಿಂಚಣಿಯನ್ನು ಸಹ ಮಂಜೂರು ಮಾಡಲಾಗಿದೆ. ಈಗಾಗಲೇ ಕಂದಾಯ ಇಲಾಖೆ ವತಿಯಿಂದ ನೀಡಿರುವ ನಿವೇಶನಗಳನ್ನು ಅವರ ಹೆಸರಿಗೆ ಹಕ್ಕು ಪತ್ರ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದ್ದು ಅತಿ ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಡಿಸಿ ಅವರು ಪ್ರತಿಯೊಬ್ಬ ಸಂತ್ರಸ್ತರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಅವರಿಗೆ ಪೌಷ್ಠಿಕ ಆಹಾರ ಮತ್ತು ಕಾಳಜಿ ವಹಿಸಲು ಸಲಹೆ ನೀಡಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಇವರ ಚೇತರಿಕೆಯ ವರದಿ ನೀಡುವಂತೆ ಹಾಗೂ ನಿಗಾವಹಿಸಲು ತಿಳಿಸಿದ್ದಾರೆ. ಸಂತ್ರಸ್ತರ ಪರ ಕಾಳಜಿ ವಹಿಸಿದ್ದಾರೆ. ಇವರ ಸೇವಾ ಕಾರ್ಯಕ್ಕೆ ನಾವು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ.

-ಪೆದ್ದನಪಾಳ್ಯ ಮಣಿ , ಸಂತ್ರಸ್ಥರ ಪರ ಹೋರಾಟಗಾರ