ದೀಕ್ಷೆ ಪಡೆದ ಎಲ್ಲ ಕೃಷ್ಣ ಭಕ್ತರಿಗೆ ಮೂಲ ಭಗವದ್ಗೀತೆ ಕೃತಿ ವಿತರಣೆ: ಶ್ರೀ ಡಾ. ಸುಗುಣೇಂದ್ರ ತೀರ್ಥ ಸ್ವಾಮೀಜಿ

| Published : Jan 06 2024, 02:00 AM IST

ದೀಕ್ಷೆ ಪಡೆದ ಎಲ್ಲ ಕೃಷ್ಣ ಭಕ್ತರಿಗೆ ಮೂಲ ಭಗವದ್ಗೀತೆ ಕೃತಿ ವಿತರಣೆ: ಶ್ರೀ ಡಾ. ಸುಗುಣೇಂದ್ರ ತೀರ್ಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಗೀತಾ ಯಜ್ಞ ಲೇಖನ ದೀಕ್ಷೆ ನೀಡಿ ಅನುಗ್ರಹ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ದೀಕ್ಷೆ ಪಡೆದ ಎಲ್ಲ ಕೃಷ್ಣ ಭಕ್ತರಿಗೆ ಮೂಲ ಭಗವದ್ಗೀತೆ ಕೃತಿ ನೀಡಲಾಗುವುದು. ಕೃತಿಯು ದೇಶದ ಎಲ್ಲ ಪ್ರಮುಖ ಭಾಷೆಗಳ ಜೊತೆಗೆ ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ಗೀತೆಯನ್ನು ಪೂರ್ತಿಯಾಗಿ ಬರೆಯಲು ಪ್ರತ್ಯೇಕ ಪುಸ್ತಕ ನೀಡುತ್ತೇವೆ. ಇದನ್ನು ಬಳಸಿಕೊಂಡು ಭಕ್ತರು ಗೀತೆಯನ್ನು ಸ್ವ ಅಕ್ಷರದಲ್ಲೇ ಪೂರ್ತಿಯಾಗಿ ಬರೆದು ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಡಾ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಗುರುವಾರ ರಾತ್ರಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟಿ ಗೀತ ಲೇಖನ ಯಜ್ಞ ದೀಕ್ಷೆ ನೆರವೇರಿಸಿ ಮಾತನಾಡಿದರು.

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಈಗಾಗಲೇ ೮೦೦ ವಿದ್ಯಾರ್ಥಿಗಳು ಗೀತೆ ಬರೆಯುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡ ಬರೆದು ಸಮರ್ಪಣೆ ಮಾಡಬಹುದು. ಶ್ರೀಕೃಷ್ಣನ ಗುರುಗಳಾದ ಸಾಂದೀಪನಿ ಮಹರ್ಷಿಗಳ ಹೆಸರಿನಲ್ಲಿ ನಡೆಯುವ ಈ ಶಾಲೆಯಲ್ಲಿ ಗೀತಾಚಾರ್ಯನ ಅಕ್ಷರ ಸೇವೆ ನಡೆಯುವುದು ಶ್ರೇಷ್ಠವಾದುದು ಎಂದು ಶ್ರೀಗಳು ನುಡಿದರು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರ್, ಸಾಮಾಜಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮುಖ್ಯ ಶಿಕ್ಷಕಿ ಜಯಮಾಲಾ ವಿ.ಎನ್. ಉಪಸ್ಥಿತರಿದ್ದರು.

ಈ ಸಂದರ್ಭ ಶ್ರೀಗಳಿಗೆ ಶಾಲೆಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಶ್ರೀ ರಾಮಚಂದ್ರನ ಬಗ್ಗೆ ಪ್ರದರ್ಶಿಸಿದ ನೃತ್ಯ ರೂಪಕವನ್ನು ವೀಕ್ಷಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಭಾಸ್ಕರ ಹಿಂದಾರ್, ಜಯರಾಮ ಕೆದಿಲಾಯ ಮತ್ತಿತರರು ಉಪಸ್ಥಿತರಿದ್ದರು.