ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಮಾಸದ ಕಡೆಯ ಶುಕ್ರವಾರ ಹಿನ್ನೆಲೆಯಲ್ಲಿ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟಕ್ಕೆ ಹೋಗುವ ಸಾವಿರಾರು ಭಕ್ತರು ಸುತ್ತೂರು ಮಠಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, ಸ್ವತಃ ತಾವೇ ಪ್ರಸಾದ ವಿತರಿಸಿದರು. ಆಷಾಢ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆಯಲ್ಲಿ ಶ್ರೀ ಮಠದಿಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ ಎಂದು ಶ್ರೀಗಳು ಹಾರೈಸಿದರು.

ಬಾಳೆಕಾಯಿ ಕಡಲೆಕಾಳು ಹುಳಿ, ಉಪ್ಪಿಟ್ಟು, ಪೊಂಗಲ್, ಮೈಸೂರು ಪಾಕ್ ವಿತರಿಸಲಾಯಿತು.


ವಿವಿಧೆಡೆ ಪ್ರಸಾದ ವಿತರಣೆ:

ಕಡೆಯ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ಕೆ.ಜಿ.ಕೊಪ್ಪಲಿನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿದ ಭಕ್ತರು, ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು. ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ. ರಸ್ತೆ, ಕೆ.ಜಿ. ಕೊಪ್ಪಲು, ಒಂಟಿಕೊಪ್ಪಲು. ಕುವೆಂಪುನಗರ, ರಾಮಕೃಷ್ಣನಗರ, ವಿಜಯನಗರ, ಚಾಮರಾಜ ಮೊಹಲ್ಲಾ, ಕೆ.ಆರ್. ಮೊಹಲ್ಲಾ ಸೇರಿದಂತೆ ನಗರದೆಲ್ಲೆಡೆ ಪ್ರಸಾದ ವಿತರಿಸಲಾಯಿತು.

ಚಾಮುಂಡೇಶ್ವರಿ ಪೂಜೆ: ಅನ್ನಪ್ರಸಾದ ವಿತರಣೆ

ಕನ್ನಡಪ್ರಭ ವಾರ್ತೆ ಮೈಸೂರುನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಕುಂದೂರು ಮಠದ ಭಕ್ತ ವೃಂದದ ವತಿಯಿಂದ 10ನೇ ವರ್ಷದ ಚಾಮುಂಡೇಶ್ವರಿ ಪೂಜಾ ಮಹೋತ್ಸವ ಹಾಗೂ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡಿದರು.

ಇದೇ ವೇಳೆ ಹರಗುರು ಚರಮೂರ್ತಿಗಳು ಎಂ.ಕೆ. ಸೋಮಶೇಖರ್ ಅವರನ್ನು ಆಶೀರ್ವದಿಸಿದರು. ಈ ವೇಳೆ ಶ್ರೀ ಶರತ್ಚಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬರಡನಪುರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಅರಮನೆ ಪಂಚಗವಿಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ನೀಲಕಂಠ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಯುವ ಕಾಂಗ್ರೆಸ್ ಘಟಕದ ರಾಕೇಶ್, ಪ್ರದೀಪ್ ಕುಮಾರ್, ಯೋಗೇಶ್ ಮೊದಲಾದವರು ಇದ್ದರು.