ಪತ್ರಿಕಾ ವಿತರಕರಿಗೆ ರೇನ್‌ಕೋಟ್‌, ಭಗವದ್ಗೀತೆ ಪುಸ್ತಕ ವಿತರಣೆ

| Published : Jun 27 2024, 01:03 AM IST

ಸಾರಾಂಶ

ಪತ್ರಿಕೆ ವಿತರಕರು ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಿ ಇತ್ತೀಚೆಗೆ ತುಂಬಾ ಅಪಘಾತಗಳು ಗಡಿಬಿಡಿಯ ಕಾರಣಕ್ಕೆ ಆಗುತ್ತಿವೆ. ಹಾಗೆಯೇ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು.

ಯಲ್ಲಾಪುರ: ಪತ್ರಿಕೆಗಳ ಬೆಳವಣಿಗೆಗೆ ವಿತರಕರ ಕೊಡುಗೆ ಅಪಾರ. ಬಿಸಿಲು, ಚಳಿ ಹಾಗೂ ಮಳೆಯೆನ್ನದೇ ಸೂರ್ಯ ಹುಟ್ಟುವ ಮುಂಚೆಯೇ ಎದ್ದು ಮನೆ ಮನೆಗೆ ಸುದ್ದಿ ತಲುಪಿಸುವ ಕಷ್ಟದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಅವರ ಕಾಯಕವನ್ನು ಪ್ರೋತ್ಸಾಹಿಸಲು ಅಳಿಲು ಸೇವೆಯನ್ನು ಮಾಡಿದ್ದೇನೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ತಿಳಿಸಿದರು.

ಪಟ್ಟಣದ ಕಾಳಮ್ಮ ನಗರದ ತಮ್ಮ ನಿವಾಸದಲ್ಲಿ ಪತ್ರಿಕೆಯ ವಿತರಕರರಿಗೆ ಭಗವದ್ಗೀತೆಯ ಪುಸ್ತಕ ನೀಡಿ, ರೇನ್ ಕೋಟ್ ವಿತರಿಸಿ ಮಾತನಾಡಿ, ಪತ್ರಿಕೆ ವಿತರಕರು ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಿ ಇತ್ತೀಚೆಗೆ ತುಂಬಾ ಅಪಘಾತಗಳು ಗಡಿಬಿಡಿಯ ಕಾರಣಕ್ಕೆ ಆಗುತ್ತಿವೆ. ಹಾಗೆಯೇ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದರು.

ಪತ್ರಿಕಾ ವಿತರಕರ ಒಕ್ಕೂಟದ ವಿತರಕ ಜಯರಾಜ ಗೋವಿ ಹಾಗೂ ಅನಿಲ ಭಟ್ ಮಾತನಾಡಿ, ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗಲು ತಮ್ಮಂತಹ ಸಹೃದಯದವರ ಬೆಂಬಲದಿಂದ ಸಾಧ್ಯವಾಗುತ್ತಿದೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೇನ್ ಕೋಟ್ ನೀಡಿ ಗೌರವಿಸಿದ್ದಕ್ಕೆ ನಿಮಗೆ ಚಿರಋಣಿಯಾಗಿದ್ದೇವೆ ಎಂದರು.

ಪ್ರಭಾವತಿ ನಿರ್ವಹಿಸಿದರು. ವಿತರಕರಾದ ಅಮೃತ ಹೆಂದ್ರೆ, ರಾಜು ಉಡುಪಿಕರ, ದೀಪಕ ಕಲಾಲ, ರಾಕೇಶ, ಅಭಿ, ಪ್ರಶಾಂತ ಗೋಖಲೆ ಇದ್ದರು.