ಯಾರೊಬ್ಬರೂ ನಿವೇಶನದಿಂದ ವಂಚಿತರಾಗಬಾರದು. ಅರ್ಹರಿಗೆಲ್ಲರಿಗೂ ನಿವೇಶನ ದೊರಕಿಸಬೇಕೆಂಬುದು ನನ್ನ ಪ್ರಮುಖ ಧ್ಯೇಯವಾಗಿದೆ. ಈಗಾಗಲೇ ಬೂದನೂರು ಗ್ರಾಮದಲ್ಲಿ ನಿವೇಶನ ರಹಿತರನ್ನು ಗುರುತಿಸಿ ಹಕ್ಕುಪತ್ರ ಕೊಟ್ಟಿದ್ದೇವೆ. ಮಂಡ್ಯ ನಗರಕ್ಕೆ ೮೦೦ ಹಕ್ಕುಪತ್ರ ಕೊಡಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಚಿಕ್ಕಮಂಡ್ಯ ಗ್ರಾಪಂ ವ್ಯಾಪ್ತಿಯಲ್ಲಿ ವಾಸವಾಗಿದ್ದ ೧೫ ಮಂದಿ ನಿವೇಶನ ರಹಿತರನ್ನು ಗುರುತಿಸಿ ಶಾಸಕ ಪಿ.ರವಿಕುಮಾರ್ ಅವರು ಹಕ್ಕುಪತ್ರ ವಿತರಿಸಿದರು.

ಜಿಲ್ಲಾಡಳಿತ, ತಾಲೂಕು ಆಡಳಿತ, ಚಿಕ್ಕಮಂಡ್ಯ ಗ್ರಾಪಂ ವತಿಯಿಂದ ಚಿಕ್ಕಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಶಾಸಕ ಪಿ.ರವಿಕುಮಾರ್, ಚಿಕ್ಕಮಂಡ್ಯ ಹಾಗೂ ಕೋಣನಹಳ್ಳಿ ತಿಟ್ಟು ಗ್ರಾಮದಲ್ಲಿ ವಾಸವಾಗಿದ್ದ ಜನರಲ್ಲಿ ಹಲವರು ನಿವೇಶನವಿಲ್ಲದೆ ವಂಚಿತರಾಗಿದ್ದರು. ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಅರ್ಹ ನಿವೇಶನ ರಹಿತರನ್ನು ಗುರುತಿಸಿ ಹಕ್ಕುಪತ್ರ ನೀಡಿರುವುದಾಗಿ ಹೇಳಿದರು.

ಯಾರೊಬ್ಬರೂ ನಿವೇಶನದಿಂದ ವಂಚಿತರಾಗಬಾರದು. ಅರ್ಹರಿಗೆಲ್ಲರಿಗೂ ನಿವೇಶನ ದೊರಕಿಸಬೇಕೆಂಬುದು ನನ್ನ ಪ್ರಮುಖ ಧ್ಯೇಯವಾಗಿದೆ. ಈಗಾಗಲೇ ಬೂದನೂರು ಗ್ರಾಮದಲ್ಲಿ ನಿವೇಶನ ರಹಿತರನ್ನು ಗುರುತಿಸಿ ಹಕ್ಕುಪತ್ರ ಕೊಟ್ಟಿದ್ದೇವೆ. ಮಂಡ್ಯ ನಗರಕ್ಕೆ ೮೦೦ ಹಕ್ಕುಪತ್ರ ಕೊಡಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಹಕ್ಕುಪತ್ರ ನೀಡಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಅಭಿವೃದ್ಧಿಗೂ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರದಿಂದ ಅಭಿವೃದ್ಧಿಗೆ ಹಣ ತಂದು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿದ್ದೇನೆ. ಮಂಡ್ಯ ನಗರ ಸೇರಿದಂತೆ ಕ್ಷೇತ್ರದ ಪ್ರಗತಿ ಬಗ್ಗೆ ಕನಸುಗಳಿವೆ. ಅವುಗಳ ಸಾಕಾರಕ್ಕೆ ನಿಮ್ಮೆಲ್ಲರ ಪ್ರೇರಣೆ, ಸಹಕಾರ ಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಸೇರಿದಂತೆ ಹಲವರಿದ್ದರು.

ಫೆ.28 ರಂದು ವಿಜ್ಞಾನ ವಸ್ತು ಪ್ರದರ್ಶನ

ಮಳವಳ್ಳಿ:

ತಾಲೂಕಿನ ಅಮೃತೇಶ್ವರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕಸಬಾ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ.

ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಚೇರಿ, ಎಸ್ಡಿಎಂಸಿ ಸಮಿತಿ, ಅಮೃತ ಚಾರಿಟಬಲ್ ಟ್ರಸ್ಟ್, ಮಕ್ಕಳ ಮನೆ ಸಮಿತಿ, ಹಿರಿಯ ವಿದ್ಯಾರ್ಥಿಗಳ ಬಳಗ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಅಂದು ಬೆಳಗ್ಗೆ 10 ಗಂಟೆಗೆ ವಸ್ತು ಪ್ರದರ್ಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಉದ್ಘಾಟಿಸುವರು. ಎಸ್ಡಿಎಂಸಿ ಅಧ್ಯಕ್ಷ ಎ.ಸಿ.ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಎಸ್.ರೇವಣ್ಣ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.

ಅತಿಥಿಗಳಾಗಿ ತಾಪಂ ಇಒ ಎಚ್.ಸಿ.ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಮಹದೇವು, ಕಂದೇಗಾಲ ಗ್ರಾಪಂ ಅಧ್ಯಕ್ಷ ಸಿ.ಮರಿಸ್ವಾಮಿ, ಉಪಾಧ್ಯಕ್ಷೆ ಪುಷ್ಪಲತಾ, ಪಿಡಿಒ ನಿರ್ಮಲಾ, ಸದಸ್ಯರಾದ ಎ.ಎಸ್.ಪುಟ್ಟರಾಜು, ಭಾಗ್ಯಮ್ಮ, ಜಯಮ್ಮ, ಅಮೃತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ರಾಜಶೇಖರ್ ಗೌಡ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕರು ತಿಳಿಸಿದ್ದಾರೆ.