ಕೊಳಚೆ ಪ್ರದೇಶದ ಎಲ್ಲ ಕುಟುಂಬಗಳಿಗೂ ಹಕ್ಕುಪತ್ರ ವಿತರಣೆ: ಶಾಸಕ ಮಾನೆ

| Published : Jan 31 2024, 02:15 AM IST

ಕೊಳಚೆ ಪ್ರದೇಶದ ಎಲ್ಲ ಕುಟುಂಬಗಳಿಗೂ ಹಕ್ಕುಪತ್ರ ವಿತರಣೆ: ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೂ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಆಸಕ್ತಿಯಿಂದ ಕೆಲಸ ಮಾಡಲಾಗುತ್ತಿದೆ.

ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೂ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಆಸಕ್ತಿಯಿಂದ ಕೆಲಸ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ೬೪ ಹಕ್ಕುಪತ್ರ ವಿತರಿಸಿದ್ದು, ಇದೀಗ 2ನೇ ಹಂತದಲ್ಲಿ ೮೪ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ತುರಬಂದಿ ಓಣಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ವಿವಿಧ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಹೋರಾಟದಲ್ಲಿ ಹಲವು ವರ್ಷಗಳ ಮೊದಲೇ ನಿರತನಾಗಿದ್ದೇನೆ. ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದರೆ ಅಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಮೊದಲಿಗೆ ಕೊಳಚೆ ಪ್ರದೇಶ ಎಂದು ಘೋಷಿಸಿ, ನಂತರ ಅಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಗಮನ ನೀಡಲಾಗಿದೆ. ಕೆಲವೆಡೆ ಖಾಸಗಿ ಜಮೀನುಗಳಲ್ಲಿಯೂ ಸಹ ಕೊಳಚೆ ಪ್ರದೇಶಗಳಿದ್ದು, ಜಮೀನಿನ ಮಾಲೀಕರ ಮನವೊಲಿಸುವ ಕೆಲಸ ಮಾಡಬೇಕಿದೆ. ಕೂಲಿಕಾರರು, ಬೀದಿ ಬದಿ ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿರುವ ಬಡ ವರ್ಗದ ಜನರೇ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಬೇಕಿದೆ. ಕೊಳಚೆ ಪ್ರದೇಶಗಳಿಗೆ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸುವ ಅಗತ್ಯವಿದೆ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷೆ ಶಂಶಿಯಾ ಬಾಳೂರ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರ ನಿರಂತರ ಪ್ರಯತ್ನದ ಫಲದಿಂದ ಇದೀಗ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಂತಾಗಿದೆ. ಇನ್ನೂ ಸಾಕಷ್ಟು ಕುಟುಂಬಗಳು ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ಮೊದಲಿಗೆ ಮನೆಯ ಮಾಲೀಕತ್ವ ಪಡೆದರೆ ನಂತರ ಸೌಲಭ್ಯಗಳೂ ಸಿಗಲಿವೆ ಎಂದರು.

ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ದೇವರಾಜ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೫ ಕೊಳಚೆ ಪ್ರದೇಶಗಳಿವೆ. ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಮನೆಗಳ ಮಾಲಿಕತ್ವ ಹೊಂದದೇ ಇರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷರಾದ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಸದಸ್ಯರಾದ ಪರಶುರಾಮ ಖಂಡೂನವರ, ವಿರುಪಾಕ್ಷಪ್ಪ ಕಡಬಗೇರಿ, ಮುನ್ನಾ ನಾಯ್ಕರ, ಸುರೇಶ ನಾಗಣ್ಣನವರ, ಮೇಕಾಜಿ ಕಲಾಲ, ಗಾಯಿತ್ರಿ ಕೊಲ್ಲಾಪೂರ, ಆಶ್ರಯ ಸಮಿತಿ ಸದಸ್ಯರಾದ ವಿನಯ ಬಂಕನಾಳ, ಮಾಲತೇಶ ಕಾಳೇರ, ನಿಯಾಜ್‌ಅಹ್ಮದ್ ಸರ್ವಿಕೇರಿ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಸಿಬ್ಬಂದಿ ಗುರುರಾಜ ಪೂಜಾರ, ಎ.ಎ. ಉಪ್ಪಿನ, ಶಿವರುದ್ರಪ್ಪ ಚನ್ನಗೌಡ್ರ, ಮಧುಮತಿ ಪಾಟೀಲ ಈ ಸಂದರ್ಭದಲ್ಲಿದ್ದರು.