ಸಾರಾಂಶ
೩ ಸಾವಿರ ರೊಟ್ಟಿ, ೧೦ ಕಟ್ಟಾ ಅಕ್ಕಿ, ಎಣ್ಣೆ ಡಬ್ಬಿಗಳು ಮತ್ತು ಇನ್ನಿತರ ಆಹಾರ ವಸ್ತುಗಳನ್ನು ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ರವಾನಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ರೈತರ ಬೇಡಿಕೆ ಈಡೇರಿಕೆಗೆ ನಡೆದಿರುವ ಅನ್ನದಾತರ ಸತ್ಯಾಗ್ರಹಕ್ಕೆ ಮಹಾಲಿಂಗಪುರ ಪಟ್ಟಣದ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಆಹಾರದ ವಸ್ತುಗಳನ್ನು ಪೂರೈಕೆ ಮಾಡಿ ನಾವೆಲ್ಲ ಸತ್ಯಾಗ್ರಹ ನಿರತರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದರು.ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದ ಪ್ರಾಂಗಣದಿಂದ ಟ್ರ್ಯಾಕ್ಟರ್ ಮೂಲಕ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಆಹಾರ ಪದಾರ್ಥ ರವಾನಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಳವಾಗದೆ ತುಟ್ಟಿ ಜಮಾನಾದ ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆ ಬೇರೆ ರೈತನ ತಲೆ ಸುಡುತ್ತಿದೆ. ರೈತ ಬಾಂಧವರ ಹೊರತು ಪಡಿಸಿ ಸರ್ಕಾರ, ಕಾರ್ಖಾನೆ ಮಾಲೀಕರು ಮತ್ತು ಬಿಡಿ ವ್ಯಾಪಾರಸ್ಥರು ಸೇರಿದಂತೆ ಎಲ್ಲ ವರ್ಗದವರೂ ಲಾಭದಲ್ಲಿ ಇದ್ದಾರೆ. ಈಗ ರೈತರಿಗೆ ವೈಜ್ಞಾನಿಕ ಅರಿವು ಉಂಟಾಗಿ ನಾವು ಬೆಳೆದ ಬೆಳೆಗೆ ಕನಿಷ್ಠ ರೂಪದಲ್ಲಿ ₹೩೫೦೦ ಕಬ್ಬಿಗೆ ಬೆಲೆ ನಿಗದಿ ಮಾಡಬೇಕೆಂದು ಕಾರ್ಖಾನೆಗಳಿಗೆ ಕೇಳುತ್ತಿದ್ದು, ಇದರಲ್ಲಿ ಯಾವುದೇ ತರಹದ ತಾರತಮ್ಯವಿಲ್ಲ. ಈಗಾಗಲೇ ಸತ್ಯಾಗ್ರಹ ೮ ದಿವಸಗಳನ್ನು ಕಳೆಯುತ್ತಿದೆ. ಇನ್ನು ಹೆಚ್ಚು ದಿನ ರೈತರ ತಾಳ್ಮೆ ಪರಿಕ್ಷಿಸದೆ ರೈತರ ನ್ಯಾಯಯುತ ದರ ಘೋಷಣೆ ಮಾಡಿ ಕಾರ್ಖಾನೆಗಳನ್ನು ಆರಂಭಿಸಿ ಬರುವ ದಿನಗಳು ದುರ್ಗಮವಾಗಲು ಅವಕಾಶ ನೀಡಬಾರದು ಎಂದರು. ೩ ಸಾವಿರ ರೊಟ್ಟಿ, ೧೦ ಕಟ್ಟಾ ಅಕ್ಕಿ, ಎಣ್ಣೆ ಡಬ್ಬಿಗಳು ಮತ್ತು ಇನ್ನಿತರ ಆಹಾರ ವಸ್ತುಗಳನ್ನು ಸತ್ಯಾಗ್ರಹ ಸ್ಥಳಕ್ಕೆ ರವಾನಿಸಿದರು.ಈ ಸಂದರ್ಭದಲ್ಲಿ ಭಾಜಪ ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ, ಮಹಾಲಿಂಗಪ್ಪ ಕೋಳಿಗುಡ್ಡ, ಮಹಾಂತೇಶ ಹಿಟ್ಟಿನಮಠ, ಯಲ್ಲಪ್ಪ ಹಟ್ಟಿ, ಸದಾಶಿವ ಗೊಬ್ಬರದ, ಮಹೇಶ ಹುಬ್ಬಳ್ಳಿ, ರಾಜು ಕೋಳಿಗುಡ್ಡ, ದಿಲೀಪ್ ಸುಣದೋಳಿ, ಶಿವಾನಂದ ತಾಳಿಕೋಟಿ, ಮಹೇಶ ಸುಣದೋಳಿ, ಬನ್ನೂರ ಸರ್ ಸೇರಿದಂತೆ ಇತರರಿದ್ದರು.
;Resize=(128,128))