ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಆರ್ಥಿಕ ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಮಹಿಳೆಯರಿಗೆ ಉಚಿತವಾಗಿ ಸ್ವ ಉದ್ಯೋಗ ತರಬೇತಿ ಮತ್ತು ದಾನಿಗಳು ನೀಡುವ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡುತ್ತಿದೆ. ಈಗಾಗಲೇ 400ಕ್ಕೂ ಅಧಿಕ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ ಹೇಳಿದರು.ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 100 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೊಲಿಗೆ ಯಂತ್ರಗಳು ಸಾಕಷ್ಟು ಸಹಾಯವಾಗುತ್ತವೆ. ಸಂಸ್ಥೆ 2005 ರಿಂದ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡುತ್ತಿದೆ. ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ಕೊಡಲಾಗುತ್ತದೆ ಎಂದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರೀಯಾಜ್ ಫಾರೂಖಿ ಮಾತನಾಡಿ, ಬಡವರ ಭಾವನೆಗಳು ಬಡವರಿಗೆ ಮಾತ್ರ ಅರ್ಥವಾಗುತ್ತವೆ. ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲು ಸಹಾಯ ಮಾಡುತ್ತಿದೆ ಎಂದರು.ಸಂಸ್ಥೆಯ ನಿರ್ದೇಶಕ ಸಲಾವುದ್ಧೀನ್ ಪುಣೇಕರ ಮಾತನಾಡಿ, ಸದ್ಯ ಕೆಲವು ಕುಟುಂಬಗಳ ಯಜಮಾನರು ದುಶ್ಚಟಗಳಿಗೆ ಬಲಿಯಾಗಿ ಮನೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಈ ಹೊಲಿಗೆ ಯಂತ್ರದಿಂದ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳು ಮನೆಯ ಜವಾಬ್ದಾರಿ ಜೊತೆಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದರು.ಫಲಾನುಭವಿ ರುಕ್ಸಾನ್ ಮಾತನಾಡಿ, ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಹೊಲಿಗೆ ತರಬೇತಿ ನೀಡಿ, ಹೊಲಿಗೆ ಯಂತ್ರ ನೀಡುತ್ತಿದೆ. ಇದರಿಂದ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಅನುಕೂಲವಾಯಿತು. ಬಡ ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ತರಬೇತಿ ನೀಡಿ ಸಹಾಯಹಸ್ತ ಚಾಚುತ್ತಿರುವ ಸಿಕ್ಯಾಬ್ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು.ಸಂಸ್ಥೆಯ ಸಂಸ್ಥಾಪಕ ಎಸ್.ಎ.ಪುಣೇಕರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಪರಶುರಾಮ ಹೊಸಮನಿ, ಗಂಗೂಬಾಯಿ ಧುಮಾಳೆ, ಅಶ್ಫಾಕ್ ಮನಗೂಳಿ, ಅಲ್ಲಾಭಕ್ಷ ಬಡೇಘರ, ಉದ್ಯಮಿಗಳಾದ ಸಂಗಮೇಶ ಗುಡ್ಡೋಡಗಿ, ಪೀಟರ್ ಅಲೆಕ್ಸಾಂಡರ್, ಸೈಯದ್ ಅಸಲಂ ಬಾಗಲಕೋಟ, ರಫೀಕ್ ಇಂಡಿಕರ, ಇಸ್ಮಾಯಿಲ್ ಬಾಂಗಿ, ಎಸ್.ಎಸ್.ಬಿಳಗಿಪೀರ, ಇಸಾ ಮುಶ್ರೀಫ್ , ಡಾ.ಎನ್.ಎ.ಇನಾಮಾದಾರ, ಕಾಲೇಜು ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.ಪ್ರಾಂಶುಪಾಲ ಡಾ.ಎಚ್.ಕೆ.ಯಡಹಳ್ಳಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಜೋಹರಾ ತಬಸುಮ್ ಖಾಜಿ ಕಾರ್ಯಕ್ರಮ ನಡೆದು ಬಂದ ವರದಿ ವಾಚಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ಸನ್ಮಾನ ನಡೆಸಿಕೊಟ್ಟರು.