Distribution of Title Deeds to 61 'Ashraya' Beneficiaries
₹1 ಕೋಟಿ ವೆಚ್ಚದಲ್ಲಿ ನವೀಕೃತ ಮುಖ್ಯ ಬಸ್ ನಿಲ್ದಾಣ ಲೋಕಾರ್ಪಣೆ । ಶಾಸಕ ಟಿ.ಡಿ. ರಾಜೇಗೌಡ ಅವರಿಂದ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕೊಪ್ಪಬಡ ಮತ್ತು ಮಧ್ಯಮ ವರ್ಗದ ಜನರ 25 ವರ್ಷಗಳ ದೀರ್ಘಕಾಲದ ನಿರೀಕ್ಷೆಗೆ ತೆರೆ ಬಿದ್ದಿದೆ. ಪಟ್ಟಣ ಪಂಚಾಯಿತಿಯಿಂದ 61 ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ₹1 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಮುಖ್ಯ ಬಸ್ ನಿಲ್ದಾಣದ ಲೋಕಾರ್ಪಣೆ ನೆರವೇರಿತು.
ಶೃಂಗೇರಿ ಶಾಸಕ, ರಾಜ್ಯ ನವೀಕರಿಸಬಹುದಾದ ಇಂಧನ ಇಲಾಖೆ ಅಧ್ಯಕ್ಷ ಟಿ.ಡಿ. ರಾಜೇಗೌಡ ಅವರು ನವೀಕೃತ ಬಸ್ ನಿಲ್ದಾಣವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ವಿದ್ಯಾನಗರದ ಸರ್ವೇ ನಂ. 77ರಲ್ಲಿ 2002ರಲ್ಲೇ ಜಾಗ ಮಂಜೂರಾಗಿದ್ದರೂ ನಾನಾ ಕಾರಣಗಳಿಂದ ಹಕ್ಕುಪತ್ರ ವಿತರಣೆ ವಿಳಂಬವಾಗಿತ್ತು. ಇದೀಗ ಪಾರದರ್ಶಕವಾಗಿ ಚೀಟಿ ಎತ್ತುವ ಮೂಲಕ 69 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 61 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಆದಾಯ ಪ್ರಮಾಣಪತ್ರದ ತಾಂತ್ರಿಕ ಹೊಂದಾಣಿಕೆ ಸಮಸ್ಯೆಯಿಂದ ಬಾಕಿ ಉಳಿದಿರುವ 8 ಹಕ್ಕುಪತ್ರಗಳನ್ನು ಕೆಲವೇ ದಿನಗಳಲ್ಲಿ ಸರಿಪಡಿಸಿ ವಿತರಿಸಲಾಗುವುದು. ಈ ದಾಖಲೆಗಳು ಸಂಪೂರ್ಣ ಕಾನೂನುಬದ್ಧವಾಗಿದ್ದು, ಫಲಾನುಭವಿಗಳು ಬ್ಯಾಂಕ್ ಸಾಲ ಹಾಗೂ ಸರ್ಕಾರದ ವಸತಿ ಯೋಜನೆಗಳ ಸಹಾಯಧನ ಪಡೆದು ಮನೆ ನಿರ್ಮಿಸಿಕೊಳ್ಳಬಹುದು ಎಂದರು.
ವ್ಯಾಪಾರಿಗಳಿಗೆ ಅಭಯ:2000ರಲ್ಲಿ ಅಂದಿನ ಸಚಿವ ಡಿ.ಬಿ. ಚಂದ್ರೇಗೌಡರ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ನಡೆದಾಗ, ಸ್ಥಳೀಯ ಮುಖಂಡರು ಹೋರಾಟ ನಡೆಸಿ ಇಲ್ಲೇ ಉಳಿಸಿಕೊಂಡಿದ್ದನ್ನು ಶಾಸಕರು ಸ್ಮರಿಸಿದರು. ಪ್ರಸ್ತುತ ₹1 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಿಸಿ, ಮುಂಭಾಗದ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ನಿಲ್ದಾಣದ ಸುತ್ತಲೂ ಶಿಥಿಲಗೊಂಡ ಅಂಗಡಿ ಮುಂಗಟ್ಟು ಹಾಗೂ ಆಟೋ ನಿಲ್ದಾಣವನ್ನು ಮುಂದಿನ 1-2 ವರ್ಷಗಳಲ್ಲಿ ಪುನರ್ನಿರ್ಮಾಣ ಮಾಡಿ, ಈಗಿರುವ ವ್ಯಾಪಾರಿಗಳಿಗೇ ಮಳಿಗೆಗಳನ್ನು ನೀಡಲಾಗುವುದು ಎಂದು ಅಭಯ ನೀಡಿದರು.
100 ಕೋಟಿ ಅನುದಾನ:ರಸ್ತೆ ಅಭಿವೃದ್ಧಿ ಹಾಗೂ ಆನೆ ಹಾವಳಿ ನಿಯಂತ್ರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹221 ಕೋಟಿ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿಗೆ 100 ಕೋಟಿ ಅನುದಾನ ತರಲಾಗಿದೆ. ಕಾಡಾನೆ ಹಾವಳಿ ತಡೆಯಲು ಈಗಾಗಲೇ 6 ಪುಂಡಾನೆ ಸೆರೆಹಿಡಿಯಲಾಗಿದ್ದು, ಮತ್ತೊಂದು ಆನೆ ಸೆರೆಗೆ ಆದೇಶಿಸಲಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾ ಕೋಸ್ ಅವರು, 2025ರ ಸೆಪ್ಟೆಂಬರ್ನಿಂದ ಆರಂಭವಾದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮತ್ತು ಶಾಸಕರ ಶ್ರಮದಿಂದ ಹಕ್ಕುಪತ್ರ ವಿತರಣೆ ಸಾಕಾರಗೊಂಡ ಬಗೆಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಪಂಚ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಒಣಿತೋಟ ರತ್ನಾಕರ್, ಪಟ್ಟಣ ಪಂಚಾಯಿತಿ ಆಶ್ರಯ ಸಮಿತಿ ಸದಸ್ಯರಾದ ಜಹೂರ್ ಹುಸೇನ್, ಸತೀಶ್ ಕೆ.ಎಸ್., ಭಾರತಿ, ತುಳಸಮ್ಮ, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ಅಶೋಕ್ ನಾರ್ವೆ, ರಾಜಶಂಕರ್, ಸಾಧಿಕ್, ವಿಎಸ್ಎಸ್ಎನ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಪಟ್ಟಣ ಪಂಚಾಯಿತಿ ಸದಸ್ಯ ರಶೀದ್, ನಾಮನಿರ್ದೇಶಿತ ಸದಸ್ಯರಾದ ಸಂದೇಶ್, ಮಾಜಿ ಅಧ್ಯಕ್ಷ ಮಾಲತಿ ಸಿ.ಕೆ., ವಾಣಿ ಸತೀಶ್, ಮಾಜಿ ಸದಸ್ಯರಾದ ವಿಜಯ್ ಕುಮಾರ್, ಮೈತ್ರಾ ಗಣೇಶ್, ಸುಮಾ ಪರ್ವತೇಗೌಡ, ಮಹಮ್ಮದ್ ಗೌಸ್, ವಸಂತಿ ಪಾಂಡುರಂಗ, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಆಶ್ರಯ ಯೋಜನೆ ಹಕ್ಕು ಪತ್ರ ಪಡೆದ ಫಲಾನುಭವಿಗಳು ಇದ್ದರು.
(ಫೋಟೊ 2 ಫೋಟೋ ಇರಲಿ)ಕೊಪ್ಪದಲ್ಲಿ ಶೃಂಗೇರಿ ಶಾಸಕರು ಮತ್ತು ಕರ್ನಾಟಕ ಸರ್ಕಾರ ನವೀಕರಿಸಬಹುದಾದ ಇಂಧನ ಇಲಾಖೆ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ ಅವರು ನವೀಕೃತ ಬಸ್ ನಿಲ್ದಾಣವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.