ಸಾರಾಂಶ
ಕನಕಗಿರಿ:
ಯೂರಿಯಾ ರಸಗೊಬ್ಬರ ಅಭಾವದ ನಡುವೆಯೂ ತಾಲೂಕಿನ ರೈತರ ಪಹಣಿ ಒಂದಕ್ಕೆ 2 ಚೀಲ ಯೂರಿಯಾ ವಿತರಿಸಲು ಕೃಷಿ ಇಲಾಖೆ ಮುಂದಾಗಿದೆ. ಹಲವೆಡೆ ಯೂರಿಯಾ ಕೊರತೆಯಾಗಿದ್ದರಿಂದ ರೈತರಿಗೆ ತೊಂದರೆಯಾಗಿದೆ. ಸರ್ಕಾರ ಮತ್ತು ಕೃಷಿ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ಪ್ರತಿ ಪಹಣಿಗೆ ಎರಡು ಚೀಲ ವಿತರಿಸಲು ಕ್ರಮವಹಿಸಲಾಗಿದೆ.ಪಟ್ಟಣದ ಗುರುಶರಣ ಪರ್ಟಿಲೈಸರ್ಸ್ 20 ಟನ್, ಮಂಜುನಾಥ ಆಗ್ರೋ ಏಜೆನ್ಸಿಗೆ 5 ಟನ್, ಮಂಜುಶ್ರೀ ಆಗ್ರೋ ಏಜೆನ್ಸಿಗೆ 5 ಟನ್ ಹಾಗೂ ಹುಲಿಹೈದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 22 ಟನ್ ಸೇರಿ 52 ಟನ್ ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡಲಾಗಿದ್ದು, ರೈತರಿಗೆ ತಲುಪುವ ನಿಟ್ಟಿನಲ್ಲಿ ಪ್ರತಿ ಪಹಣಿಗೆ 2 ಚೀಲದಂತೆ ನೀಡಲಾಗುತ್ತದೆ. ಹೆಚ್ಚು ಭೂಮಿ ಹೊಂದಿದ ರೈತರು ಮೂರ್ನಾಲ್ಕು ದಿನದ ನಂತರ ಯೂರಿಯಾ ತೆಗೆದುಕೊಳ್ಳಬಹುದಾಗಿದೆ. ಮೊದಲು ತೆಗೆದುಕೊಳ್ಳುವ ರೈತರಿಗೆ ಆದ್ಯತೆ ನೀಡಲಾಗುತ್ತಿದ್ದು, ಉಳಿದದ್ದನ್ನು ಎರಡನೇ ಬಾರಿಯೂ ವಿತರಿಸಲು ಅವಕಾಶ ನೀಡಲಾಗಿದೆ. ಸದ್ಯ ಮದ್ರಾಸ್ ಪರ್ಟಿಲೈಜರ್ಸ್ ಲಿಮಿಟೆಡ್‌ನಿಂದ ತಾಲೂಕಿಗೆ 52 ಟನ್ ಬಂದಿದೆ. ಇನ್ನೂ 50 ಟನ್ ಗೊಬ್ಬರವನ್ನು ರಾಷ್ಟ್ರೀಯ ಕೆಮಿಕಲ್ ಪರ್ಟಿ ಲೈಜರ್ಸ್ ವತಿಯಿಂದ ಖರೀದಿಸಲು ಕ್ರಮಕೈಗೊಳ್ಳುವುದಾಗಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಈ ವೇಳೆ ಕೃಷಿ ಅಧಿಕಾರಿ ನವೀನ್, ಆಗ್ರೋ ಏಜೆನ್ಸಿ ಮಾಲೀಕರಾದ ಅಂದಾನಪ್ಪ ಉಡಮಕಲ್, ಮಹಾಬಳೇಶಪ್ಪ ಮಾಂತಗೊಂಡ, ಗಣೇಶ ಎಂ, ಅಂಬಾಜಪ್ಪ ಧಾಯಿಪುಲ್ಲೆ ಇದ್ದರು.