ವಿದ್ಯಾರ್ಥಿಗಳಿಗೆ ಉಪಯುಕ್ತ ಪರಿಕರ ವಿತರಣೆ

| Published : May 04 2025, 01:31 AM IST

ವಿದ್ಯಾರ್ಥಿಗಳಿಗೆ ಉಪಯುಕ್ತ ಪರಿಕರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಪರಿಕರ ನೀಡಲಾಯಿತು. ಸುಮಾರು 1.40 ಲಕ್ಷ ರು. ಮೌಲ್ಯದ ವಸ್ತುಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಪೊನ್ನಂಪೇಟೆಯ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಪರಿಕರ ನೀಡಲಾಯಿತು.

ಜಿಲ್ಲಾ ಮಟ್ಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಪೋಷಕರಿಲ್ಲದ ಹಾಗೂ ಒಂಟಿ ಪೋಷಕರಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ 40 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ಕೊಡೆ, ಬೆಡ್ ಶೀಟ್ ಹಾಗೂ ಇನ್ನಿತರ ಲೇಖನ ಪರಿಕರಗಳು, ಒಬ್ಬ ವಿದ್ಯಾರ್ಥಿಗೆ ಬ್ರೈಲ್ ಕಿಟ್, ಒಬ್ಬರು ಫಲಾನುಭವಿಗೆ ವಿಲ್ ಚೇರ್, ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ನಿತ್ಯ ಬಳಕೆಯ ಆಹಾರದ ಕಿಟ್ ಸೇರಿದಂತೆ ಸುಮಾರು 1.40 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜ್ಞಾನ ಜ್ಯೋತಿ ಕಾರುಣ್ಯ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಆಹಾರ, ಆರೋಗ್ಯ, ಶಿಕ್ಷಣಕ್ಕೆ ನೆರವು: ಒಕ್ಕೂಟದ ವಕ್ತಾರಾದ ಶಶಿಕುಮಾರ್ ಚೆಟ್ಟಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ವಕ್ತಾರರಾದ ಎಂ. ಇ. ಮಹಮದ್ ಅವರು ಹೂ ಕುಂಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಮಾಜದ ವಿವಿಧ ವರ್ಗಗಳಲ್ಲಿರುವ ಸಂಕಷ್ಟ ಕುಟುಂಬವನ್ನು ಗುರುತಿಸಿ ಅವರಿಗೆ ಆಹಾರ, ಆರೋಗ್ಯ ಹಾಗೂ ಶಿಕ್ಷಣಕ್ಕೆ ನೆರವು ನೀಡುವುದೇ ಮಾನವೀಯ ಸ್ನೇಹಿತರ ಒಕ್ಕೂಟದ ಧ್ಯೇಯವಾಗಿದೆ. ಒಕ್ಕೂಟದ ವಾಟ್ಸಾಪ್ ಗ್ರೂಪ್ ನಲ್ಲಿ 180ಕ್ಕೂ ಅಧಿಕ ಸಂಖ್ಯೆಯ ಸದಸ್ಯರುಗಳಿದ್ದು, ಅವರುಗಳ ಸಹಕಾರದ ಫಲವಾಗಿ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ 40 ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯ ಪರಿಕರಗಳನ್ನು ಕಾರುಣ್ಯ ಕಾರ್ಯಕ್ರಮದಲ್ಲಿ ನೀಡಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ವಾಟ್ಸಪ್ ಸಂಘಟನೆಯಲ್ಲಿ 50 ಕ್ಕೂಅಧಿಕ ಮಹಿಳಾ ಪ್ರತಿನಿಧಿಗಳಿದ್ದು, ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಒಕ್ಕೂಟವು ಇಂದು ಜಿಲ್ಲಾದ್ಯಂತ ಗುರುತಿಸಲ್ಪಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮಾತನಾಡಿ ಬಹುತೇಕ ಸಾಮಾಜಿಕ ಜಾಲತಾಣಗಳು ಸಮಾಜ ಒಡೆಯುವ ಕೆಲಸಗಳನ್ನು ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ, ವಾಟ್ಸಾಪ್ ಗ್ರೂಪ್ ಮೂಲಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜಾತಿ, ಧರ್ಮ, ಭೇದವಿಲ್ಲದೆ ಸಂಕಷ್ಟ ದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಾ ಬರುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟದ ಕಾರ್ಯ ಶ್ಲಾಘನೀಯ ಎಂದರು. ಒಕ್ಕೂಟದ ಪ್ರತಿನಿಧಿಗಳಾದ ಡಾ. ಶಿವಪ್ಪ, ಚೀರಂಡ ಕಂದ ಸುಬ್ಬಯ್ಯ, ಅಡ್ಮಿನ್ ಬಾಳೆಯಡ ದಿವ್ಯ ಮಂದಪ್ಪ ಅವರು ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ, ಒಕ್ಕೂಟದ ಪ್ರತಿನಿಧಿಗಳ ಸಹಕಾರದಿಂದ ಜ್ಞಾನ ಜ್ಯೋತಿ ಕಾರುಣ್ಯ ಕಾರ್ಯಕ್ರಮ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಸ್ಥಾಪಕ ಅಡ್ಮಿನ್ ರಶೀದ್ ಕೊರೋತ್ ಪ್ರಾಸ್ತಾವಿಕ ಮಾತನಾಡಿದರು. ಸುನೀತಾ ಬಿಳಿಗೇರಿ ಒಕ್ಕೂಟದ ಧ್ಯೇಯಗೀತೆ ಹಾಡಿದರು.

ಕಾರ್ಯಕ್ರಮದ ಮೊದಲಿಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಡಿದ ನಾಗರಿಕರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇತ್ತೀಚೆಗೆ ನಿಧನರಾದ ಒಕ್ಕೂಟದ ಪ್ರತಿನಿಧಿ ತೆರೇಸ ಅವರಿಗೆ ಸಂತಾಪ ವ್ಯಕ್ತ ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೈಬುಲಿರ ಪಾರ್ವತಿ ಬೋಪಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಮಾನವೀಯ ಸ್ನೇಹಿತರ ಒಕ್ಕೂಟದ ಸ್ಥಾಪಕ ಅಡ್ಮಿನ್ ಗಳಾದ ಅನಿಲ್ ಕುಮಾರ್ ರೈ ಹಾಗೂ ರಶೀದ್ ಕೊರೋತ್, ಎಂ. ಇ. ಮಹಮ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ಥಾಪಕ ಅಡ್ಮಿನ್ಗಳಾದ ಅನಿಲ್ ಕುಮಾರ್ ರೈ, ರಶೀದ್ ಕೊರೋತ್, ಶರೀಫ್ ಎಮ್ಮೆಮಾಡು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಕ್ಕೂಟದ ಎಲ್ಲಾ ಅಡ್ಮಿನ್ ಗಳಿಗೂ ತಮ್ಮ ವತಿಯಿಂದ ನೆನಪಿನ ಕಾಣಿಕೆಯಾಗಿ ಗಡಿಯಾರವನ್ನು ನೀಡಿದರು.

ಈ ಸಂದರ್ಭ ಒಕ್ಕೂಟದ ಶಿಸ್ತು ಮತ್ತು ಸಲಹಾ ಸಮಿತಿಯ ಸಂಚಾಲಕರಾದ ಡೇವಿಡ್ ವೇಗಸ್,

ವಿಶೇಷ ಆಹ್ವಾನಿತರಾದ ಪ್ರವೀಣ್ ರೈ, ಆಲೆಮಾಡ ನವೀನ್ ದೇವಯ್ಯ, ನಿಯಾಜ್ ಸುಂಟಿಕೊಪ್ಪ, ಸೋನಿ ರೈ, ಟಿ. ಅರ್. ವಿನೋದ್, ಸುನೀತ ಗಿರೀಶ್, ಆನಿ ಸಾಲ್ಡಾನ, ಒಕ್ಕೂಟದ ಅಡ್ಮಿನ್ ಗಳಾದ ಅನಿಲ್ ಕುಮಾರ್, ಹನೀಫ್ ಸೋನಾ, ಕವಿತ. ಎನ್. ಹೆಚ್, ಕವಿತ ರಮೇಶ್, ದಶರಥ, ಎ. ಎಚ್. ಇಂದಿರಾ, ಚೀರಂಡ ಚಂಗಪ್ಪ, ಲೀಲಾವತಿ, ಒಕ್ಕೂಟದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.