ಒಗ್ಗಟ್ಟಿನಿಂದ ಕೆಲಸ ಮಾಡಿ ಅವಕಾಶ ಪಡೆಯಿರಿ

| Published : Feb 24 2025, 12:36 AM IST

ಸಾರಾಂಶ

ಎಲ್ಲರೂ ಒಗ್ಗಟ್ಟಿನಿಂದ ಒಂದೇ ವೇದಿಕೆಯಲ್ಲಿ ಕೆಲಸ ಮಾಡುವಂತಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಬಂಜಾರ (ಲಂಬಾಣಿ) ಸಮುದಾಯವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಕರೆ ನೀಡಿದರು.

ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಸಂತ ಸೇವಾಲಾಲ್ ಜಯಂತ್ಯುತ್ಸವ ಆಚರಣಾ ಸಮಿತಿ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಒಗ್ಗಟ್ಟಿನಿಂದ ಒಂದೇ ವೇದಿಕೆಯಲ್ಲಿ ಕೆಲಸ ಮಾಡುವಂತಾಗಬೇಕು. ನಾವು ಒಗ್ಗಟ್ಟಾಗಿ ಇದ್ದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಫಲರಾಗುತ್ತೇವೆ. ಹೀಗಾಗಿ, ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಲಂಬಾಣಿ ಸಮುದಾಯ ಕರ್ನಾಟಕಕ್ಕಿಂತ ಹೆಚ್ಚಾಗಿ ಉತ್ತರಕರ್ನಾಟಕದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಮೈಸೂರಿನ ಭಾಗಗಳಲ್ಲಿ ಏಳರಿಂದ ಎಂಟು ಸಾವಿರ ಜನಸಂಖ್ಯೆ ಮಾತ್ರ ಇದೆ. ನಮ್ಮ ಚಾಮರಾಜ ಕ್ಷೇತ್ರದಲ್ಲಿ ಬಂಜಾರ ಸಮುದಾಯದವರಿಗೆ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಿದ್ದೇವೆ. ಬಂಜಾರ ಸಮುದಾಯ ಕೇಳುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಜಾರ ಸಮುದಾಯದ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿದ್ದಾರೆ. ನಮ್ಮ ಸರ್ಕಾರವು ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಮೇಲೆತ್ತುವಂತಹ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದೆ. ನಾನು ಸಹ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಹ ಲಂಬಾಣಿ ಸಮುದಾಯಗಳ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಸೇವಾಲಾಲ್ ಕೊಡುಗೆ ಅಪಾರ

ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಮನುಷ್ಯ ಏನಾದರೂ ಕಲಿಯಬೇಕು ಎಂದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಯಾರು ಸಹ ಸರ್ವಜ್ಞರಲ್ಲ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

280 ವರ್ಷಗಳ ಹಿಂದೆ ಸಂತ ಸೇವಾಲಾಲ್ ಅವರು ಮಾಡಿರುವಂತಹ ಕೆಲಸಗಳು ಅಪಾರವಾದದ್ದು, ಅವುಗಳನ್ನು ಪ್ರಚಾರ ಮಾಡಲು ಯಾವುದೇ ಮಾಧ್ಯಮಗಳು ಇರಲಿಲ್ಲ. ಹಾಗೂ ಅವರ ಪುಸ್ತಕಗಳನ್ನು ಪ್ರಚಾರ ಮಾಡಲು ಯಾರು ಇರಲಿಲ್ಲ. ಅಂತಹ ಕಾಲದಲ್ಲಿಯೇ ಸಂತ ಸೇವಾಲಾಲ್ ಅವರು ಎಷ್ಟೋ ಜನರ ಮನಸ್ಸು ಗೆದ್ದಿದ್ದಾರೆ ಎಂದರೆ ಅವರು ಮಾಡಿದಂತಹ ಕೆಲಸ ಸಮಾಜಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರ ಎಂದು ಅವರು ಹೇಳಿದರು.

ಪ್ರತಿಯೊಬ್ಬ ಸಾಧಕರು ನಮಗೆ ಕೊಟ್ಟಿರುವಂತಹ ನುಡಿಮುತ್ತುಗಳನ್ನು, ಭಾವನೆಗಳನ್ನು ಸ್ವೀಕರಿಸಬೇಕು. ಸಂತ ಸೇವಾಲಾಲ್ ಪುಸ್ತಕಗಳನ್ನು ಓದಬೇಕು. ನಿಮ್ಮಲ್ಲಿ ಒಬ್ಬರಾದರೂ ಸಂತ ಸೇವಾಲಾಲ್ ಅವರ ರೀತಿ ಬೆಳೆಯಬೇಕು ಎಂದು ಅವರು ಆಶಿಸಿದರು.

ಕಲಬುರಗಿ ಜಿಲ್ಲೆಯ ಅಬಕಾರಿ ಅಧೀಕ್ಷಕ ಶ್ರೀರಾಮ್ ದೇವಸೋಥ್ ಅವರು ವಿಶೇಷ ಉಪನ್ಯಾಸ ನೀಡಿದರು. ವಿಜಯನಗರ ಜಿಲ್ಲೆಯ ಬಂಜಾರ ಶ್ರೀಶಕ್ತಿ ಪೀಠದ ಶ್ರೀ ಶಿವಪ್ರಕಾಶ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಬಂಜಾರ ಸೇವಾ ಸಂಘದ ಅಧ್ಯಕ್ಷ ಎಂ. ಸುಂದರ್, ಉಪಾಧ್ಯಕ್ಷ ತೇಜಾನಾಯ್ಕ್, ಕಾರ್ಯದರ್ಶಿ ಎಂ. ಅನಿಲ್, ಮುಖಂಡರಾದ ಕಾವೇರಿ ಬಾಯಿ, ಧರಣಿಭಾಯಿ ಸುದರ್ಶನ್, ಪ್ರಕಾಶ್ ಮೊದಲಾದವರು ಇದ್ದರು.

----

ಕೋಟ್...

ಯಾವುದೇ ಒಂದು ಸಮಾಜ ರಾಜಕೀಯವಾಗಿ ಧಾರ್ಮಿಕವಾಗಿ ಶಕ್ತಿಯುತವಾಗಿ ಬೆಳೆಯಬೇಕೆಂದರೆ ನಮ್ಮಲ್ಲಿ ಒಗ್ಗಟ್ಟಿನ ಜೊತೆಗೆ ಶಕ್ತಿ ಹಾಗೂ ಬುದ್ಧಿವಂತಿಕೆ ಇರಬೇಕು. ಲಂಬಾಣಿ ಸಮುದಾಯದಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಟ್ಟಿರುವುದು ಬಹಳ ಸಂತೋಷವಾಗಿದೆ. ಪ್ರತಿಯೊಂದು ಸಮಾಜವು ಮುಂದೆ ಬರಬೇಕು. ಬಲಿಷ್ಠವಾಗಿ ಬೆಳೆಯಬೇಕು.

- ಸಿ.ಎನ್. ಮಂಜೇಗೌಡ, ವಿಧಾನಪರಿಷತ್ತು ಸದಸ್ಯ