ಟಿಪ್ಪರ್ ಸಹಿತ ನೀರು ತುಂಬಿದ ಕಲ್ಲು ಕ್ವಾರಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿರುವ ಚಾಲಕನ ಮೃತದೇಹ ಪತ್ತೆ ಹಚ್ಚುವಲ್ಲಿ ವಿಫಲವಾಗಿರುವುದನ್ನು ನೋಡಿದರೆ ಜಿಲ್ಲಾಡಳಿತ ಜೀವಂತವಾಗಿಲ್ಲ ಎನಿಸುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಟಿಪ್ಪರ್ ಸಹಿತ ನೀರು ತುಂಬಿದ ಕಲ್ಲು ಕ್ವಾರಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿರುವ ಚಾಲಕನ ಮೃತದೇಹ ಪತ್ತೆ ಹಚ್ಚುವಲ್ಲಿ ವಿಫಲವಾಗಿರುವುದನ್ನು ನೋಡಿದರೆ ಜಿಲ್ಲಾಡಳಿತ ಜೀವಂತವಾಗಿಲ್ಲ ಎನಿಸುತ್ತಿದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯಲ್ಲಿರುವ ಕಲ್ಲು ಗಣಿಗಾರಿಕೆ ಕ್ವಾರಿ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಚಾಲಕನ ಸಹಿತ ನೀರು ತುಂಬಿದ ಹಳ್ಳಕ್ಕೆ ಬಿದ್ದಿದ್ದ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಲ್ಲಿ ಬಡಕುಟುಂಬಕ್ಕೆ ಸಾವೂ ಕೂಡ ಒಂದು ಬಿಟ್ಟಿ ಭಾಗ್ಯವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದರು.

ಘಟನೆ ಸಂಭವಿಸಿ ಎರಡು ದಿನ ಕಳೆದರೂ ಕೂಡ ಒಬ್ಬ ಕೂಲಿ ಕಾರ್ಮಿಕನ ದೇಹವನ್ನು ಜಿಲ್ಲಾಡಳಿತ ಪತ್ತೆಹಚ್ಚಿಲ್ಲ. ಇನ್ನು ತಾಲೂಕು ಆಡಳಿತ ರಾಜಕಾರಣಿ ಹಿಡಿತದಲ್ಲಿ ಸಿಲುಕಿ ಅದ್ವಾನವಾಗಿದೆ. ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ಪಾಲುಕೂಡ ಇದ್ದಂತೆ ಕಾಣಿಸುತ್ತಿದೆ ಎಂದು ದೂರಿದರು.

ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ತಹಸೀಲ್ದಾರ್ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಚಾಲಕನ ಹುಡುಕುವ ಕಾರ್ಯಕ್ಕೆ ಮುಂದಾಗಿಲ್ಲ ಎಂದರೆ ಯಾವ ರೀತಿಯ ಆಡಳಿತ ನೆಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ತಾಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನೆಡೆಯುತ್ತಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದೀರಿ. ಇಂತಹ ಅಕ್ರಮ ಗಣಿಗಾರಿಕೆಗಳನ್ನು ಮಟ್ಟ ಹಾಕಲು ನಿಮ್ಮಿಂದ ಆಗುತ್ತಿಲ್ಲವೆ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡ ಸುರೇಶ್‌ಗೌಡರು, ವಾರಕೊಮ್ಮೆ ಕಲ್ಲು ಕ್ವಾರೆಗಳಿಗೆ ಯಾವ ಯಾವ ಅಧಿಕಾರಿಗಳು ವಸೂಲಿಗೆ ಬರುತ್ತಾರೆ ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.

ಘಟನೆಯಲ್ಲಿ ಚಾಲಕ ಲಕ್ಷ್ಮಣ ಬದುಕುಳಿದಿರುವ ಸಾಧ್ಯತೆಯಿಲ್ಲ. ಹಾಗಾಗಿ ಆತನ ದೇಹವನ್ನು ಪತ್ತೆಹಚ್ಚಿ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ಒದಗಿಸದಿದ್ದರೆ ನಾವೇ ಮುಂದೆ ನಿಂತು ಹುಡುಕಾಟ ನಡೆಸಿ ನಮ್ಮದೇ ರೀತಿಯಲ್ಲಿ ನ್ಯಾಯ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.