ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಸಿದ್ಧ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Jun 13 2024, 12:52 AM IST

ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಸಿದ್ಧ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ರಕ್ಷಣಾ ಇಲಾಖೆ ಫೈರಿಂಗ್ ರೇಂಜ್ ನಿರ್ಮಿಸಲು 1960ರಲ್ಲಿ ಈ ಜಾಗೆಯನ್ನು ಕಾಯ್ದಿರಿಸಿತ್ತು. ಆದರೀಗ ಈ ಪ್ರದೇಶದ ಸುತ್ತಲೂ ಜನವಸತಿ ನಿರ್ಮಾಣಗೊಂಡಿದೆ. ನಾಗರಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ನಡೆಸಲು ಈ ಜಾಗೆಯಿಂದ ತೊಂದರೆ ಉಂಟಾಗುತ್ತಿದೆ.

ಹುಬ್ಬಳ್ಳಿ:

ಇಲ್ಲಿಯ ವಿಶ್ವೇಶ್ವರ ನಗರದಲ್ಲಿ ರಕ್ಷಣಾ ಇಲಾಖೆ ಕಾಯ್ದಿರಿಸಿದ ಜಾಗೆಯನ್ನು ಸ್ಥಳೀಯ ನಾಗರಿಕರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ವಿಶ್ವೇಶ್ವರ ನಗರದಲ್ಲಿ ಇರುವ ರಕ್ಷಣಾ ಇಲಾಖೆ ಅಧೀನದ 17.1 ಎಕರೆ ಜಾಗೆ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಬುಧವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಕ್ಷಣಾ ಇಲಾಖೆ ಫೈರಿಂಗ್ ರೇಂಜ್ ನಿರ್ಮಿಸಲು 1960ರಲ್ಲಿ ಈ ಜಾಗೆಯನ್ನು ಕಾಯ್ದಿರಿಸಿತ್ತು. ಆದರೀಗ ಈ ಪ್ರದೇಶದ ಸುತ್ತಲೂ ಜನವಸತಿ ನಿರ್ಮಾಣಗೊಂಡಿದೆ. ನಾಗರಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ನಡೆಸಲು ಈ ಜಾಗೆಯಿಂದ ತೊಂದರೆ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರಿಂದ ಆಗ್ರಹ ವ್ಯಕ್ತವಾಗುತ್ತಿದೆ ಎಂದರು.

ಈಗಾಗಲೇ ನಡೆಸಿದ ಸ್ಥಳ ಪರಿಶೀಲನೆ ವೇಳೆ ರಕ್ಷಣಾ ಇಲಾಖೆ ಜಾಗೆಯಲ್ಲಿಯೇ ಡ್ರೈನೇಜ್ ಸೇರ್ಪಡೆಗೊಳ್ಳುತ್ತಿದೆ. ಇಲ್ಲಿ ಚರಂಡಿ, ಯುಜಿಡಿ ಸಂಪರ್ಕ ಸಾಧಿಸುವ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿ ನಡೆಸಬೇಕಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ ಅವಕಾಶ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ, ಜಾಗೆ ಸುತ್ತಲಿನ ಪ್ರದೇಶ ಜನವಸತಿ ಪ್ರದೇಶವಾಗಿ ನಿರ್ಮಾಣಗೊಂಡಿದ್ದು, ಇಲಾಖೆಗೆ ಫೈರಿಂಗ್ ರೇಂಜ್ ನಿರ್ಮಾಣವೂ ಅಸಾಧ್ಯ. ಇಂತಹ ವಿಚಾರಗಳನ್ನು ಜಿಲ್ಲಾಡಳಿತದಿಂದ ಇಲಾಖೆಗೆ ಮನವರಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ರಕ್ಷಣಾ ಇಲಾಖೆಯ ಈ ಜಾಗವನ್ನು ಜಿಲ್ಲಾಡಳಿತ ಇಲ್ಲವೇ, ಪಾಲಿಕೆ ಸುಪರ್ದಿಗೆ ಪಡೆದು ಇಲಾಖೆ ಬೇಡಿಕೆಗೆ ಅನುಗುಣವಾಗಿ ಪರ್ಯಾಯ ಜಮೀನು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಇದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಆಡಳಿತಾತ್ಮಕ ಪ್ರಕ್ರಿಯೆ ಮುಕ್ತಾಯದ ವರೆಗೂ ಸ್ಥಳೀಯವಾಗಿ ಗಟಾರು, ರಸ್ತೆ ನಿರ್ಮಾಣ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಈ ಪ್ರದೇಶದಲ್ಲಿ ಕೈಗೊಂಡ ಸಿಸಿ ರಸ್ತೆ ನಿರ್ಮಾಣದ 6 ಕಾಮಗಾರಿಗಳಲ್ಲಿ 4 ಮುಕ್ತಾಯಗೊಂಡಿದ್ದು, ಉಳಿದ ಸಿಸಿ ರಸ್ತೆಗಳು ಜುಲೈ 30ರೊಳಗಾಗಿ ಪೂರ್ಣಗೊಳ್ಳಲಿವೆ. ಸದ್ಯ ರಕ್ಷಣಾ ಇಲಾಖೆ ವ್ಯಾಪ್ತಿಯ ಜಾಗೆಯಲ್ಲಿ ಕೈಗೊಳ್ಳುವ ರಸ್ತೆ, ಯುಜಿಡಿ ಕಾಮಗಾರಿ ನಡೆಸಲು ತೊಂದರೆ ಆಗುತ್ತಿದೆ. ಇದರಿಂದ ಸ್ಥಳೀಯರು ನಿರಂತರವಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಜಿಲ್ಲಾಡಳಿತವೂ ಪರ್ಯಾಯ ಜಮೀನು ಒದಗಿಸಲು ಒಪ್ಪಿಕೊಂಡಿದೆ. ಹೀಗಾಗಿ ಈ ವಿಚಾರವನ್ನು ಇಲಾಖೆಗೆ ಮನವರಿಕೆ ಮಾಡುವ ಕೆಲಸವನ್ನು ಕೇಂದ್ರ ಸಚಿವರ ನೇತೃತ್ವದಲ್ಲಿ ಮಾಡಲಾಗುವುದು ಎಂದರು.

ಈ ವೇಳೆ ಪಾಲಿಕೆ ಸದಸ್ಯರಾದ ಸೀಮಾ ಮೊಗಲಿಶೆಟ್ಟರ, ವೀರಣ್ಣ ಸವಡಿ, ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ಡಿ.ಟಿ. ರಾಜಮಾನೆ, ರವಿ ನಾಯಕ ಸೇರಿದಂತೆ ಹಲವರಿದ್ದರು.