ಗುಳೆ ಹೋದವರನ್ನು ಟ್ರ್ಯಾಕ್‌ ಮಾಡುತ್ತಿರುವ ಜಿಲ್ಲಾಡಳಿತ

| Published : Apr 22 2024, 02:19 AM IST

ಗುಳೆ ಹೋದವರನ್ನು ಟ್ರ್ಯಾಕ್‌ ಮಾಡುತ್ತಿರುವ ಜಿಲ್ಲಾಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ತಾಂಡಾ, ಹಳ್ಳಿಗಳಿಂದ ಜನರು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ದುಡಿಯಲು ಹೋಗಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಬರ ಹಿನ್ನೆಲೆ ಜಿಲ್ಲೆಯ ಹಳ್ಳಿ, ತಾಂಡಾಗಳ ಜನರು ಕೆಲಸ ಅರಸಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗಿದ್ದಾರೆ. ಗುಳೆ ಹೋದವರು ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾಡಳಿತ ಲೋಕಸಭೆ ಚುನಾವಣೆ ಕುರಿತು ಮತದಾನ ಜಾಗೃತಿ ಮೂಡಿಸಲು ಅವರನ್ನು ಟ್ರ್ಯಾಕ್ ಮಾಡುವ ಕಾರ್ಯ ಸದ್ದಿಲ್ಲದೇ ನಡೆಸಿದೆ.

ತಾಂಡಾ, ಹಳ್ಳಿಗಳಿಂದ ಜನರು ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ದುಡಿಯಲು ಹೋಗಿದ್ದಾರೆ. ಇನ್ನು ಕೆಲವರು ಮಲ್ಪೆ, ಕಾರವಾರ ಬಂದರುಗಳಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳಿದ್ದಾರೆ. ಇನ್ನು ಮಂಡ್ಯ, ಮೈಸೂರು ಭಾಗದಲ್ಲಿ ಕಬ್ಬು ಕಟಾವು, ಬೆಂಗಳೂರು, ಮಂಗಳೂರು ನಗರಗಳಲ್ಲಿ ಕಟ್ಟಡ ಕಾಮಗಾರಿ ಕೆಲಸಕ್ಕೂ ಜನರು ತೆರಳಿದ್ದಾರೆ. ಮೇ 7ರಂದು ಬಳ್ಳಾರಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಮತದಾನದ ದಿನ ಈ ಜನರು ಮರಳಿ ಬಂದು, ತಮ್ಮ ಹಕ್ಕು ಚಲಾವಣೆ ಮಾಡಲಿ ಎಂದು ವಿಜಯನಗರ ಜಿಲ್ಲಾಡಳಿತ ಇವರ ಮಾಹಿತಿ ಕಲೆ ಹಾಕುತ್ತಿದೆ.

ಪಿಡಿಒಗಳಿಗೆ ಟಾರ್ಗೆಟ್‌:

ಜಿಪಂ ಸಿಇಒ ಸದಾಶಿವಪ್ರಭು ಈಗಾಗಲೇ ಜಿಲ್ಲೆಯ ಎಲ್ಲ ಪಿಡಿಒಗಳಿಗೆ ಗುಳೆ ಹೋದವರ ಮಾಹಿತಿ ಕಲೆ ಹಾಕಲು ಸೂಚಿಸಿದ್ದಾರೆ. ಕಬ್ಬು ಕಟಾವು, ಕಟ್ಟಡ ಕಾಮಗಾರಿ, ಕಾಫಿ ಸೀಮೆ, ಗಾರ್ಮೆಂಟ್ಸ್‌ ಕಾಮಗಾರಿಗಳಿಗೆ ತೆರಳಿರುವ ಜಿಲ್ಲೆಯ ಜನರ ಮಾಹಿತಿ ಕಲೆ ಹಾಕಲು ಗ್ರಾಪಂ ಪಿಡಿಒಗಳಿಗೆ ಸೂಚಿಸಿದ್ದಾರೆ. ಗುಳೆ ಹೋದ ಜನರ ಮೇಸ್ತ್ರಿ, ತೋಟದ ಮಾಲೀಕರ ಮೊಬೈಲ್‌ ನಂಬರ್‌ ಕಲೆ ಹಾಕಲು ಸೂಚಿಸಿದ್ದಾರೆ. ಗುಳೆ ಹೋದ ಜನರಲ್ಲಿ ಕೆಲ ಪ್ರಮುಖರ ಮೊಬೈಲ್‌ ನಂಬರ್‌ ಪತ್ತೆ ಹಚ್ಚಲು ಸೂಚಿಸಿದ್ದಾರೆ.

ಗುಳೆ ಹೋದವರಿಗೆ ತಲುಪುವುದು ಹೇಗೆ?:

ಪಿಡಿಒಗಳು ಕಲೆ ಹಾಕುವ ಮಾಹಿತಿ ಪರಿಶೀಲಿಸಿ, ಇದರ ಆಧಾರದಲ್ಲಿ ಗುಳೆ ಹೋದವರಿಗೆ ಮೊಬೈಲ್ ಮೂಲಕವೇ ಮತದಾನ ಜಾಗೃತಿ ಮೂಡಿಸಲಾಗುವುದು. ಆಯಾ ಜಿಲ್ಲಾಡಳಿತಕ್ಕೆ ಪತ್ರ ಬರೆದು, ಜಿಲ್ಲೆ ಜನರು ದುಡಿಯಲು ತಮ್ಮಲ್ಲಿ ಬಂದಿದ್ದು, ಅವರಿಗೆ ಮತದಾನ ಜಾಗೃತಿ ಮೂಡಿಸಿ ತವರು ಜಿಲ್ಲೆಗೆ ಮೇ 7ರಂದು ಮತದಾನ ಮಾಡಲು ಕಳುಹಿಸಿಕೊಡಬೇಕು ಎಂದು ಪತ್ರ ಬರೆದು ತಿಳಿಸುವ ಆಲೋಚನೆ ಕೂಡ ವಿಜಯನಗರ ಜಿಲ್ಲಾಡಳಿತ ಹೊಂದಿದೆ.

ಜಿಲ್ಲೆಯ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಂದರೆ, ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರಲಿದೆ. ಜಿಲ್ಲೆಯ 1234 ಮತಗಟ್ಟೆಗಳ ಪೈಕಿ 869 ಮತಗಟ್ಟೆಗಳು ಗ್ರಾಮೀಣ ಭಾಗದಲ್ಲಿ ಬರಲಿವೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲು ಜಿಲ್ಲಾಡಳಿತ ಗುಳೆ ಹೋದವರಲ್ಲೂ ಮತದಾನ ಜಾಗೃತಿ ಮೂಡಿಸಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಕ್ರಮ ವಹಿಸುತ್ತಿದೆ.

ಜಿಲ್ಲೆಯಿಂದ ಗುಳೆ ಹೋದವರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದೆ. ಪಿಡಿಒಗಳಿಗೆ ಇವರ ಬಗ್ಗೆ ಮಾಹಿತಿ ಪಡೆಯಲು ಸೂಚಿಸಲಾಗಿದೆ. ಆಯಾ ಜಿಲ್ಲಾಡಳಿತಗಳಿಗೂ ಪತ್ರ ಬರೆಯಲಾಗುವುದು ಎನ್ನುತ್ತಾರೆ ಜಿಪಂ ಸಿಇಒ ಸದಾಶಿವಪ್ರಭು ಬಿ.