ಹಾಸನಾಂಬೆ ದೇಗುಲದಿಂದ ಮಾಧ್ಯಮದವರನ್ನು ದೂರ ಇಟ್ಟ ಜಿಲ್ಲಾಡಳಿತ

| Published : Oct 08 2025, 01:00 AM IST

ಹಾಸನಾಂಬೆ ದೇಗುಲದಿಂದ ಮಾಧ್ಯಮದವರನ್ನು ದೂರ ಇಟ್ಟ ಜಿಲ್ಲಾಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್‌ ಅಧ್ಯಕ್ಷತೆಯಲ್ಲಿ ಪ್ರೆಸ್‌ ಕ್ಲಬ್‌ನಲ್ಲಿ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋಗಿ ಮೌನ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅಧಿದೇವತೆ ಶ್ರೀ ಹಾಸನಾಂಬೆ ಇಂದು ದೇಶ ವಿದೇಶಗಳಲ್ಲಿ ಕೂಡ ಹೆಸರುವಾಸಿಯಾಗಿದ್ದು, ಇದಕ್ಕೆ ಮಾಧ್ಯಮಗಳ ಕೊಡುಗೆ ಅಪಾರವಿದೆ. ಇದರ ಫಲವಾಗಿ ದೇವಸ್ಥಾನದ ಬಾಗಿಲು ತೆರೆಯುವ ಹತ್ತು ಹನ್ನೆರೆಡು ದಿನಗಳಲ್ಲಿ ನಾಲ್ಕೈದು ಕೋಟಿ ರು. ಕಾಣಿಕೆ ಸಂಗ್ರಹದ ಮೂಲಕ ಎ ಪ್ಲಸ್‌ ಶ್ರೇಣಿ ಪಡೆದುಕೊಂಡಿದೆ. ಆದರೆ, ಈ ವರ್ಷ ಜಿಲ್ಲಾಡಳಿತ ಹತ್ತಿದ ಏಣಿ ಒದ್ದಂತೆ ಇಡೀ ಉತ್ಸವದಿಂದ ಪತ್ರಕರ್ತರನ್ನೇ ದೂರ ಇಡುತ್ತಿದ್ದು, ಇಡೀ ಪತ್ರಕರ್ತ ಸಮೂಹ ಜಿಲ್ಲಾಡಳಿತದ ಈ ಧೋರಣೆಯನ್ನು ಖಂಡಿಸಿದೆ.

ಇದರ ಅಂಗವಾಗಿ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್‌ ಅಧ್ಯಕ್ಷತೆಯಲ್ಲಿ ಪ್ರೆಸ್‌ ಕ್ಲಬ್‌ನಲ್ಲಿ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋಗಿ ಮೌನ ಪ್ರತಿಭಟನೆ ಮಾಡಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದಸುಪ ವಿಭಾಗಾಧಿಕಾರಿ ಮಾರುತಿ ಆಗಮಿಸಿ ಪತ್ರಕರ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ನಂತರದಲ್ಲಿ ಸ್ಥಳಕ್ಕಾಗಮಿಸಿದ ಸಂಸದ ಶ್ರೇಯಸ್‌ ಪಟೇಲ್‌ ಅವರು ಪತ್ರಕರ್ತರ ದೂರು ಆಲಿಸಿ ನಂತರ ಹಾಸನಾಂಬ ದೇವಸ್ಥಾನದ ಬಳಿ ಇದ್ದ ಎಸಿ ಹಾಗೂ ಡಿಸಿ ಯವರನ್ನು ಭೇಟಿ ಮಾಡಿ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಿದ್ಧತೆಗಳ ವೀಕ್ಷಣೆಗೆಂದು ಬಂದಿದ್ದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಕೂಡ ಡಿಸಿ ಕಚೇರಿ ಬಳಿ ಬಂದು ಪತ್ರಕರ್ತರ ದೂರು ಆಲಿಸಿದರು.

ಯೂಟ್ಯೂಬ್‌ ಚಾನಲ್‌ಗಳಿಗೆ ಮಣೆ:

ಅ. 9ರಂದು ಹಾಸನಾಂಬೆ ದೇವಾಲಯದ ಪವಿತ್ರ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಕ್ತರಲ್ಲಿ ಉತ್ಸಾಹ ನೆರೆದಿದ್ದು, ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಆದರೆ ಈ ಬಾರಿ ಜಿಲ್ಲಾಡಳಿತವು ಮಾಧ್ಯಮದವರನ್ನು ಅಣಕಿಸಿದಂತ ನಡವಳಿಕೆ ತೋರುತ್ತಿದ್ದು, ಪತ್ರಿಕಾ ಹಾಗೂ ಟಿವಿ ಮಾಧ್ಯಮದ ಪ್ರತಿನಿಧಿಗಳಿಗೆ ಯಾವೊಂದು ಮಾಹಿತಿಯನ್ನೂ ನೀಡದೆ ಕೇವಲ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೆ ಮಾತ್ರ ಮಾಹಿತಿ ನೀಡುತ್ತಿರುವುದು ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ವೇಣುಕುಮಾರ್‌, ಹಾಸನಾಂಬೆ ಜಾತ್ರೆ ಹಾಸನದ ಹೆಮ್ಮೆಯ ಗುರುತು. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಹಾಸನಾಂಬ ದೇವಸ್ಥಾನ ಹೇಗಿತ್ತು? ಈಗ ಹೇಗಿದೆ. ಈ ಮಟ್ಟದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಕೊಡುಗೆ ಸಾಕಷ್ಟಿದೆ. ಮಾಧ್ಯಮದವರ ಸಹಕಾರದಿಂದಲೇ ದೇವಿಯ ಖ್ಯಾತಿ ವಿಶ್ವಮಟ್ಟಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮವನ್ನೇ ಇಡೀ ಉತ್ಸವದಿಂದ ಹೊರಗಿಡುವಂತೆ ಜಿಲ್ಲಾಡಳಿತ ವರ್ತಿಸುತ್ತಿರುವುದು ಅನ್ಯಾಯ ಎಂದು ದೂರಿದರು.

ಮೌನ ಪ್ರತಿಭಟನೆಯ ಸಮಯದಲ್ಲಿ ಹಾಸನ ಪತ್ರಿಕಾ ಮತ್ತು ಟಿವಿ ಮಾಧ್ಯಮ ಸಂಘದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಭಕ್ತರ ಹಿತದೃಷ್ಟಿಯಿಂದ ಹಾಗೂ ಮಾಹಿತಿ ಪಾರದರ್ಶಕತೆಗಾಗಿ ಎಲ್ಲ ಮಾಧ್ಯಮಗಳಿಗೂ ಸಮಾನ ಅವಕಾಶ ನೀಡುವಂತೆ ಆಗ್ರಹಿಸಿದರು.ಮಾಧ್ಯಮದ ಪ್ರತಿಭಟನೆಯ ಬಳಿಕ ಜಿಲ್ಲಾಡಳಿತದ ಅಧಿಕಾರಿಗಳು ಈ ವಿಷಯವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ, ಪತ್ರಿಕಾ ಮಾಧ್ಯಮ ವಲಯದಲ್ಲಿ ಈಗಾಗಲೇ ಅಸಮಾಧಾನದ ವಾತಾವರಣ ನಿರ್ಮಾಣವಾಗಿದೆ. ಏನಾದರೂ ಮಾಧ್ಯಮದವರನ್ನ ಕಡೆಗಣಿಸಿ ಮೇಲ್ನೋಟಕ್ಕೆ ತೇಪೆ ಹಾಕುವ ಕೆಲಸ ಮಾಡಿದರೆ ಮಾಧ್ಯಮದ ಎಲ್ಲರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ಮಾಡುವುದಾಗಿ ನಿರ್ಧರಿಸಕಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಹರೀಶ್‌, ಮೋಹನ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್‌, ಕಾರ್ಯದರ್ಶಿಗಳಾದ ಸಂತೋಷ್‌, ಶ್ರೀನಿವಾಸ್‌, ನಟರಾಜ್‌, ಮಾಜಿ ಅಧ್ಯಕ್ಷರಾದ ರವಿನಾಕಲಗೂಡು, ಮಂಜುನಾಥ್‌, ಉದಯ್‌ ಕುಮಾರ್‌, ರಾಷ್ಟ್ರೀಯ ಮಂಡಳಿ ಸದಸ್ಯ ಪ್ರಕಾಶ್ ಹಾಗೂ ಮಾಧ್ಯಮ ಬಂಧುಗಳು ಇದ್ದರು.