ಹಿಂದೂ ಹಬ್ಬಕ್ಕಷ್ಟೇ ಜಿಲ್ಲಾಡಳಿತ ಅಡ್ಡಿ: ಬಿ.ಪಿ.ಹರೀಶ ಆರೋಪ

| Published : Oct 19 2025, 01:00 AM IST

ಹಿಂದೂ ಹಬ್ಬಕ್ಕಷ್ಟೇ ಜಿಲ್ಲಾಡಳಿತ ಅಡ್ಡಿ: ಬಿ.ಪಿ.ಹರೀಶ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂಗಳ ಹಬ್ಬಕ್ಕೆ ಮಾತ್ರ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವೆಂದು ಸಬೂಬು ಹೇಳಿ, ಅಡ್ಡಿಪಡಿಸುವ ಜಿಲ್ಲಾಡಳಿತವು ಮಸೀದಿ- ದರ್ಗಾಗಳಲ್ಲಿ ಅದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಧ್ವನಿವರ್ಧಕದಲ್ಲಿ ಕೂಗುವುದನ್ನು ಯಾಕೆ ತಡೆಯುತ್ತಿಲ್ಲ? ಜೀವಂತ ವ್ಯಕ್ತಿಗಳ ಹೆಸರನ್ನು ಸರ್ಕಾರಿ ಕಟ್ಟಡ, ಸಭಾಂಗಣ ಇತರೆ ಇಟ್ಟಿದ್ದನ್ನು ಯಾಕೆ ತೆರವುಗೊಳಿಸುತ್ತಿಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಕಿಡಿಕಾರಿದ್ದಾರೆ.

- ಜೀವಂತ ವ್ಯಕ್ತಿಗಳ ಹೆಸರು ತೆರವು ಆದೇಶ ಪಾಲಿಸದಿದದ್ದರೆ ಮತ್ತೆ ಕೋರ್ಟ್ ಮೊರೆ । 124 ಡಿಸಿಬಲ್ ಮೇಲಿನ ಪಟಾಕಿ ನಿಷೇಧಕ್ಕೆ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೂಗಳ ಹಬ್ಬಕ್ಕೆ ಮಾತ್ರ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವೆಂದು ಸಬೂಬು ಹೇಳಿ, ಅಡ್ಡಿಪಡಿಸುವ ಜಿಲ್ಲಾಡಳಿತವು ಮಸೀದಿ- ದರ್ಗಾಗಳಲ್ಲಿ ಅದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಧ್ವನಿವರ್ಧಕದಲ್ಲಿ ಕೂಗುವುದನ್ನು ಯಾಕೆ ತಡೆಯುತ್ತಿಲ್ಲ? ಜೀವಂತ ವ್ಯಕ್ತಿಗಳ ಹೆಸರನ್ನು ಸರ್ಕಾರಿ ಕಟ್ಟಡ, ಸಭಾಂಗಣ ಇತರೆ ಇಟ್ಟಿದ್ದನ್ನು ಯಾಕೆ ತೆರವುಗೊಳಿಸುತ್ತಿಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಕಿಡಿಕಾರಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 125 ಡೆಸಿಬಲ್‌ ಮೇಲಿನ ಪಟಾಕಿ ನಿಷೇಧವೆನ್ನುವ ಜಿಲ್ಲಾಡ‍ಳಿತವು ಮಸೀದಿ, ದರ್ಗಾದಲ್ಲಿ ನಿತ್ಯ ನಸುಕಿನಿಂದ ದಿನವಿಡೀ ಕೂಗುವ ಧ್ವನಿವರ್ಧಕಗಳಿಗೆ ಯಾಕೆ ತೆರವುಗೊಳಿಸುತ್ತಿಲ್ಲ. ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ಹಿಂದೂಗಳ ವಿರುದ್ಧದ ತೀರ್ಪು ಮಾತ್ರ ಗೊತ್ತಾಗುತ್ತದೆಯಾ? ಮಸೀದಿ, ದರ್ಗಾಗಳ ಧ್ವನಿವರ್ಧಕಗಳ ಮೂಲಕ ಕೂಗುವವರನ್ನು ಕೇಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ಜೀವಂತ ವ್ಯಕ್ತಿಗಳ ಹೆಸರನ್ನು ಸಾರ್ವಜನಿಕ ಸ್ಥಳ, ಸರ್ಕಾರಿ ಕಟ್ಟಡ, ಸಭಾಂಗಣಗಳಿಗೆ ಇಡಬಾರದೆಂಬ ಆದೇಶವಿದೆ. ಚನ್ನಗಿರಿ ತಾಲೂಕು ಕ್ರೀಡಾಂಗಣಕ್ಕೆ 2012ರಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೆಸರಿಟ್ಟಾಗ ನ್ಯಾಯಾಲಯದ ಮೆಟ್ಟಿಲೇರಿ, ಮಾಡಾಳ್ ವಿರೂಪಾಕ್ಷಪ್ಪ ಹೆಸರು ತೆರವುಗೊಳಿಸಿದ್ದ ಜಿಲ್ಲಾಧಿಕಾರಿ ಎಲ್ಲರಿಗೂ ಒಂದೇ ಕಾನೂನು ಎಂಬುದನ್ನು ಅರಿಯಲಿ ಎಂದರು.

ಕೋರ್ಟ್‌ನಲ್ಲಿ ಕೇಸ್‌ ದಾಖಲಿಸುತ್ತೇವೆ:

ಕಟ್ಟಡ, ಸಭಾಂಗಣಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೆಸರನ್ನು ಇಟ್ಟಿರುವುದರ ವಿರುದ್ಧ ವಕೀಲ ರಾಘವೇಂದ್ರ ಹೈಕೋರ್ಟ್ ಮೊರೆಹೋಗಿದ್ದರು. ಜೀವಂತ ವ್ಯಕ್ತಿಗಳ ಹೆಸರನ್ನು ಇಡದಂತೆ ಹೈಕೋರ್ಟ್ ಆದೇಶ ಮಾಡಿದೆ. ಅಂತಹ ಆದೇಶ ಪಾಲಿಸಲು ವಿಳಂಬ ಮಾಡುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ಡಿಸಿ ಕಚೇರಿ ಬಳಿ ಪ್ರತಿಭಟಿಸುವ ಜೊತೆಗೆ ನ್ಯಾಯಾಲಯದಲ್ಲಿ ನ್ಯಾಯಾಂಗ ಆದೇಶ ಉಲ್ಲಂಘನೆ ಕೇಸ್ ಸಹ ದಾಖಲು ಮಾಡುತ್ತೇವೆ. ವಕೀಲ ರಾಘವೇಂದ್ರ ಪ್ರಕರಣದಲ್ಲಿ 16.6.2025ರಂದೇ ಹೈಕೋರ್ಟ್ ತೀರ್ಪು ನೀಡಿದೆ. ಅದನ್ನು ಯಾಕೆ ಜಿಲ್ಲಾಧಿಕಾರಿ ಪಾಲಿಸುತ್ತಿಲ್ಲ ಎಂದು ಹರೀಶ್‌ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಟಿಂಕರ್ ಮಂಜಣ್ಣ, ಗೋವಿಂದ, ಪಿ.ಎಸ್.ವೀರಣ್ಣ ಇತರರು ಇದ್ದರು.

- - -

(ಬಾಕ್ಸ್‌-1) * ಡಿಸಿ ವರ್ಗವಣೆ ಮಾಡಿಸಿಕೊಳ್ಳಲಿ ಆದೇಶವಾಗಿ 4 ತಿಂಗಳಾದರೂ ಅದು ಪಾಲನೆಯಾಗಿಲ್ಲ. ಜಿಲ್ಲಾಡಳಿತ, ಜಿಪಂ, ಪಾಲಿಕೆ ನ್ಯಾಯಾಲಯದ ಆದೇಶ ಪಾಲಿಸಲಿ. ಆದರೆ, ಜಿಲ್ಲಾಧಿಕಾರಿ ಸಂಬಂಧಿಸಿದವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಕರೆಯುವ ಮೂಲಕ ನ್ಯಾಯಾಂಗ ಆದೇಶ ಉಲ್ಲಂಘಿಸುತ್ತಿದ್ದಾರೆ. ಈ ಹಿಂದೆ ಇದೇ ಡಿಸಿ ಲ್ಯಾಂಡ್ ಆರ್ಮಿಯಲ್ಲಿದ್ದ ವೇಳೆ ಉತ್ತಮವಾಗಿ ಕೆಲಸ ಮಾಡಿದ್ದರು. ಆದರೆ, ಈಗ ಜಿಲ್ಲಾಧಿಕಾರಿಯಾಗಿ ಕಾಂಗ್ರೆಸ್ಸಿನ ಸಚಿವರು, ಶಾಸಕರ ಮನೆ ಸೇವೆ ಮಾಡಲು ಬಂದಿದ್ದಾರಾ? ನಿಮ್ಮಿಂದ ಇಲ್ಲಿ ಕೆಲಸ ಮಾಡಲಾಗದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ. ಕೋರ್ಟ್‌ ಆದೇಶದಂತೆ ಜೀವಂತ ವ್ಯಕ್ತಿಗಳ ಹೆಸರನ್ನು ಸರ್ಕಾರಿ ಕಟ್ಟಡ, ಜಾಗ, ಸಭಾಂಗಣಕ್ಕೆ ಇಟ್ಟಿದ್ದನ್ನು ತೆರವು ಮಾಡಿಸಲಿ. ಆದೇಶ ಪಾಲಿಸದಿದ್ದರೆ ಅಷ್ಟು ಸುಲಭವಾಗಿ ನಿಮಗೆ ನಾವಂತೂ ಬಿಡುವುದಿಲ್ಲ ಎಂದು ಶಾಸಕ ಹರೀಶ ಎಚ್ಚರಿಸಿದರು. - - -

(ಬಾಕ್ಸ್‌-2) * ಹೆಲ್ಮೆಟ್ ಧರಿಸದವರು, ಹಾಫ್ ಹೆಲ್ಮೆಟ್ ಧರಿಸಿದವರ ವಿರುದ್ಧ ಪಿ.ಜೆ. ಬಡಾವಣೆ, ಎಂ.ಸಿ. ಕಾಲನಿ, ವರ್ತುಲ ರಸ್ತೆ, ಬಡಾವಣೆ ಪ್ರದೇಶದಲ್ಲಷ್ಟೇ ಫೀಲ್ಡ್‌ಗೆ ಇಳಿಯುವ ಜಿಲ್ಲಾ ಎಸ್‌ಪಿ ಹಳೇ ಭಾಗದಲ್ಲಿ ಟೊಪ್ಪಿಗೆ ಹಾಕಿಕೊಂಡು, ಹೆಲ್ಮೆಟ್ ಸಹ ಧರಿಸದೇ ನಿರಂತರ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಯಾಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹರಿಹರ ಶಾಸಕ ಹರೀಶ್‌ ಜಿಲ್ಲಾ ಪೊಲೀಸ್ ಇಲಾಖೆಗೆ ಪ್ರಶ್ನಿಸಿದರು.

ಹಳೇ ಭಾಗದಲ್ಲಿ ಕುಂಕುಮ ಹಚ್ಚಿದವರಿಗಷ್ಟೇ ಕ್ರಮ, ಟೋಪಿ ಹಾಕಿದವರ ವಿರುದ್ಧ ಯಾಕೆ ಯಾವುದೇ ಕ್ರಮ ಇಲ್ಲ? ಶೇ.80 ಕಾನೂನು ಪಾಲಿಸುವ ಹಿಂದೂಗಳ ಮೇಲಷ್ಟೇ ಕ್ರಮ, ಶೇ.100ರಷ್ಟು ಉಲ್ಲಂಘಿಸುವವರ ವಿರುದ್ಧ ಯಾವುದೇ ಕ್ರಮ ಯಾಕಿಲ್ಲ ಎಂದು ಎಸ್‌ಪಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಆಜಾದ್ ನಗರ, ಬಾಷಾ ನಗರ ಸೇರಿದಂತೆ ಹಳೇ ಭಾಗದಲ್ಲಿ ಟೋಪಿ ಹಾಕಿ ದ್ವಿಚಕ್ರ ಚಾಲನೆ ಮಾಡುವ ಎಷ್ಟು ಜನರ ವಿರುದ್ಧ ಕ್ರಮ ಕೈಗೊಂಡಿದ್ದೀರಿ? ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾದ ಅಕ್ಕಿ, ರಾಗಿ ಯಾರ ಪಾಲಾಗುತ್ತಿದೆ? ಎಲ್ಲಿಗೆ ಹೋಗುತ್ತಿದೆ ಗೊತ್ತಾ? ಗಾಂಜಾ, ಅಫೀಮು, ಮಾದಕ ವಸ್ತುಗಳ ಮಾರಾಟ, ಸಾಗಾಟ, ಬಳಕೆ ಯಥೇಚ್ಛವಾಗಿ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಾ? ನಾನೇನಾದರೂ ಮಾತನಾಡಿದರೆ, ಪ್ರಶ್ನಿಸಿದರೆ ಅದನ್ನು ಬೇರೆ ರೀತಿಯೇ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು.

- - -

-18ಕೆಡಿವಿಜಿ1-ದಾವಣಗೆರೆಯಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.