ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ: ಡೀಸಿ

| Published : Feb 10 2024, 01:45 AM IST

ಸಾರಾಂಶ

ಮನೆ, ಮನೆಗೆ ಭೇಟಿ ನೀಡಿ ಸರ್ವೇಕಾರ್ಯ ನಡೆಸಿರುವ ಬಿಎಲ್‌ಓಗಳು ಮತಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಯ ಪಕ್ಕ ಡಾಟ ಕಾರ್ಯವನ್ನು ಮಾಡಿದ್ದಾರೆ. ಚುನಾವಣೆಯಲ್ಲಿ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ಚುನಾವಣಾ ಆಯೋಗದ ಸೂಚನೆಯಂತೆ ಮುಂಬರಲಿರುವ ಲೋಕಸಭಾ ಚುನಾವಣೆಗೆ ಕೋಲಾರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ, ಚುನಾವಣಾ ನಿಯಮಗಳನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಲು ನಿಯೋಜಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಜಿಲ್ಲಾ ಆಡಳಿತ ಕಚೇರಿಯ ಅಡಿಟೊರೀಯಂನಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂನಿಂದ ಲೋಕಸಭೆಯ ಸಾರ್ವತ್ರಿಕ ಚುನಾವಣಾ-೨೦೨೪ ಕಾರ್ಯಾಗಾರದಲ್ಲಿ ಮಾತನಾಡಿ, ಮನೆ, ಮನೆಗೆ ಭೇಟಿ ನೀಡಿ ಸರ್ವೇಕಾರ್ಯ ನಡೆಸಿರುವ ಬಿಎಲ್‌ಓಗಳು ಮತಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆದು ಹಾಕುವಿಕೆಯ ಪಕ್ಕ ಡಾಟ ಕಾರ್ಯವನ್ನು ಮಾಡಿದ್ದಾರೆ ಎಂದರು.

18 ಸಾವಿರ ಹೊಸ ಮತದಾರರು

ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ೧೮ ಸಾವಿರ ಹೊಸ ಮತದಾರರ ಸೇರ್ಪಡೆಯಾಗಿದೆ, ಚುನಾವಣಾ ಪ್ರತಿಬೂತ್‌ನಲ್ಲಿ ೧೫೦೦ ಮತದಾರರಿಗಿಂತ ಹೆಚ್ಚಾಗಿ, ೧೪೦೦ ಮತದಾರರಿಗಿಂತ ಕಡಿಮೆ ಇಲ್ಲದಂತೆ ಮಾಡಲಾಗಿದೆ, ಪ್ರತಿ ಬೂತ್ ಅಂತರ ೨ ಕಿ.ಮೀ ಒಳಗೆ ಇರುವಂತೆ ಸ್ಥಾಪಿಸಲಾಗಿದೆ, ಪ್ರತಿ ಮತಕೇಂದ್ರಕ್ಕೆ ಸುಮಾರು ೫ ರಿಂದ ೬ ಲಕ್ಷ ರೂ. ವೆಚ್ಚ ತಗಲುವುದರಿಂದ ಎಚ್ಚರಿಕೆಯಿಂದ ಮಾಡಲಾಗಿದೆ, ೬೨ ಮತ ಕೇಂದ್ರಗಳನ್ನು ತೆಗೆದು ೫೦ ಮತ ಕೇಂದ್ರಗಳನ್ನು ಮತ್ತೊಂದರಲ್ಲಿ ಸೇರ್ಪಡೆ ಮಾಡಲಾಗಿದೆ, ೬೨ ಮತ ಕೇಂದ್ರಗಳನ್ನು ರಾಷ್ಟ್ರೀಕರಣ ಮಾಡಲಾಗಿದೆ ಎಂದರು.ಚುನಾವಣಾ ಅಧಿಕಾರಿಗಳಾಗಿ ನಿಯೋಜಿತರಾದ ಮೇಲೆ ನೀವು ಯಾವುದೇ ರೀತಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ, ಪ್ರಚಾರ ಮಾಡುವಂತಿಲ್ಲ, ಯಾವುದೇ ಪಕ್ಷದ ಪರವಾಗಿ ವರ್ತಿಸುವಂತಿಲ್ಲ ನೀವು ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುತ್ತೀರಿ ಎಂಬ ಎಚ್ಚರಿಕೆಯು ಇರಬೇಕು ಎಂದರು.ಅಧಿಕಾರಿಗಳ ನಡುವೆ ಹೊಂದಾಣಿಕೆ ಮುಖ್ಯಅಪರ ಜಿಲ್ಲಾಧಿಕಾರಿ ಶಂಕರ್ ವ್ಯಾಣಿಕರ್ ಮಾತನಾಡಿ, ಇಂದು ಆಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗವಾಗಿದ್ದು ಎಲ್ಲವನ್ನು ಕೈಬೆರಳುಗಳ ಮೂಲಕ ಅರಿಯಬಹುದು, ನಿಭಾಯಿಸಬಹುದಾಗಿದೆ. ವೆಬ್‌ಸೆಟ್, ಯೂಟ್ಯೂಬ್‌ಗಳ ಮೂಲಕ ಮಾಹಿತಿಗಳನ್ನು ಅರಿಯಬಹುದಾಗಿದೆ, ಚುನಾವಣೆಯಲ್ಲಿ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಆರ್.ಓ, ಎಆರ್‌ಓ ತಹಸೀಲ್ದಾರ್. ಇ.ಓ. ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲರೂ ಚುನಾವಣೆಯಲ್ಲಿ ಯಾವುದೇ ರೀತಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾಗಿದೆ, ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದೆ, ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕೊಂಡೊಯ್ಯಲು ಹಲವಾರು ನಿಬಂಧನೆಗಳಿವೆ. ಸೂಕ್ಷ್ಮ ಮತಗಟ್ಟೆಗಳನ್ನು ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ವಿವರಿಸಿದರು.

ಅಧಿಕಾರಿಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿ ಅಮೀರ್ ಪಾಷರಿಂದ ಉಪನ್ಯಾಸ ನೀಡಿದರು.