ಭೂ ಮಂಜೂರಾತಿ ಕಡತಗಳಲ್ಲಿ ಅರ್ಜಿದಾರರು ಮತ್ತು ಅಧಿಕಾರಿಗಳ ಸಹಿಯನ್ನೂ ಕೂಡ ನಕಲು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನಲ್ಲಿ ನಡೆಯುತ್ತಿರುವ ಭೂ ಅಕ್ರಮಗಳಿಗೆ ಜಿಲ್ಲಾ, ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳೇ ಕಾರಣ ಎಂದು ಆರೋಪಿಸಿದ ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮತ್ತು ಜಿಪಂ ಮಾಜಿ ಸದಸ್ಯ ಕಂಚನಹಳ್ಳಿ ಬಾಲಕೃಷ್ಣ ಅವರು, ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಕೆಲ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಮತ್ತು ಗೋಮಾಳದ ಭೂಮಿಯನ್ನು ತಮ್ಮ ಕುಟುಂಬಸ್ಥರ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ತಾಲೂಕಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಮಂಜೂರಾತಿ ಕಡತಗಳಲ್ಲಿ ಅರ್ಜಿದಾರರು ಮತ್ತು ಅಧಿಕಾರಿಗಳ ಸಹಿಯನ್ನೂ ಕೂಡ ನಕಲು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಈ ಹೋರಾಟಕ್ಕೆ ತಾಲೂಕಿನಲ್ಲಿ ಆಸಕ್ತರು ಕೈಜೋಡಿಸಬೇಕೆಂದು ಮನವಿ ಮಾಡಿದರು.ನಕಲಿ ದಾಖಲೆಗಳನ್ನು ಸೃಷ್ಟಿಸಿ 1 ಸಾವಿರಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿರುವುದರಿಂದ ಕೋಟ್ಯಂತರ ರು. ಹಣ ವರ್ಗಾವಣೆ ಆಗಿದೆ. ಜೊತೆಗೆ ಗೋಮಾಳ, ಸರ್ಕಾರಿ ಹಾಗೂ ಖರಾಬ್ ಜಮೀನುಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶ್ರೀಮಂತರು ಹಾಗೂ ಮಧ್ಯವರ್ತಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ನಿಜವಾದ ಬಡವರಿಗೆ ಸಿಗಬೇಕಾದ ಜಮೀನು ಸಿಕ್ಕಿಲ್ಲ. ಅಲ್ಲದೇ, ಕೆಲವರಿಗೆ ಮಂಜೂರಾಗಿದ್ದ ಜಮೀನಿನ ಮೇಲೆಯೂ ಅಕ್ರಮವಾಗಿ ದಾಖಲೆ ಸೃಷ್ಟಿಸಿದ್ದಾರೆ. ಇವೆಲ್ಲವನ್ನು ಕಣ್ಣಾರೆ ಕಂಡರು ಸಂಬಂಧಿಸಿದ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ದೂಷಿಸಿದರು.ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಭೂ-ಕಬಳಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಈವರೆಗೂ ಯಾರೊಬ್ಬರ ವಿರುದ್ಧ ಕ್ರಮವಾಗಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದ ಜಮೀನನ್ನೂ ಕೂಡ ಸರ್ಕಾರ ವಶಕ್ಕೆ ಪಡೆದುಕೊಂಡಿಲ್ಲ. ಇದರ ಬೆನ್ನಲ್ಲೇ ತಾಲೂಕು ಆಡಳಿತ ಸೌಧದ ಮುಂಭಾಗದ ಕಸದ ತೊಟ್ಟಿಯಲ್ಲಿ ಭೂದಾಖಲೆಗಳು ಪತ್ತೆಯಾಗಿವೆ ಎಂದರು.
ಉಪ ಲೋಕಾಯುಕ್ತರು ಭೇಟಿ ನೀಡಿದ್ದಾಗಲೂ ಅಕ್ರಮಗಳ ಬಗ್ಗೆ ಯಾವುದೇ ತನಿಖೆಯಾಗಿಲ್ಲ. ಇವೆಲ್ಲವನ್ನು ಗಮನಿಸಿದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಕ್ರಮ ಮಾಡಿರುವವರ ಬೆನ್ನಿಗೆ ನಿಂತಿದ್ದಾರೆಂಬ ಅನುಮಾನ ಮೂಡುತ್ತಿದೆ. ಹಾಗಾಗಿ ಸೂಕ್ತ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.ತಾಲೂಕಿನಲ್ಲಿ ನಡೆದಿರುವ ಭೂ-ಕಬಳಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ನಾವು ನಡೆಸುವ ಕಾನೂನು ಹೋರಾಟಕ್ಕೆ ಜನಸಾಮಾನ್ಯರು, ನಿವೃತ್ತ ನೌಕರರು, ಸಂಘ ಸಂಸ್ಥೆಯವರು ಹಾಗೂ ತಾಲೂಕಿನ ಹಿತಚಿಂತಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.