ಪ್ರಧಾನಿ ಮೋದಿಯವರ ಜನ್ಮದಿನವಾದ ಸೆ. ೧೭ರಂದು ಸೇವಾ ದಿವಸ್ ಆಚರಿಸಲಾಗುತ್ತಿದ್ದು, ಜಿಲ್ಲೆಯ ಮಂದಿರಗಳಲ್ಲಿ ಪೂಜೆ, ಪ್ರತಿಯೊಂದು ಬೂತ್ ಮಟ್ಟದಲ್ಲಿ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಆಶೀರ್ವಾದ್ ಕೆ ದಿಯೇ(ಆಶೀರ್ವಾದದ ದೀಪ) ಕಾರ್ಯಕ್ರಮದ ಅಡಿಯಲ್ಲಿ ದೀಪಗಳನ್ನು ಬೆಳಗಿಸಲಾಗುವುದು.

ಕುಮಟಾ: ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಬದುಕಿನಲ್ಲಿ ೨೫ ವರ್ಷಗಳ(ಕಾಲು ಶತಮಾನ) ಸಾರ್ಥಕ ಜನಸೇವೆಯನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷವು ದೇಶಾದ್ಯಂತ ಸೆ. ೧೭ರಿಂದ ಅ. ೧೭ರ ವರೆಗೆ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದಡಿ ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲೂ ಜನಸಾಮಾನ್ಯರನ್ನು ಜೊತೆಯಾಗಿಸಿಕೊಂಡು ಸರಣಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅ. ೭, ೨೦೦೧ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ೨೦೧೪ರಲ್ಲಿ ಪ್ರಧಾನಿಯಾದರು. ಅಂದಿನಿಂದ ಇಂದಿನವರೆಗೆ ಸೇವೆಯೇ ಪರಮ ಧರ್ಮ ಎಂದು ದೇಶದ ಕಟ್ಟಕಡೆಯ ವ್ಯಕ್ತಿಯ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಅವರ ೨೫ ವರ್ಷಗಳ ಸಾಂವಿಧಾನಿಕ ಆಡಳಿತದ ಸಾಧನೆ ಮತ್ತು ದೇಶಕ್ಕೆ ನೀಡಿದ ಕೊಡುಗೆಯ ಐತಿಹಾಸಿಕ ಸಾಧನೆಯ ಕೃತಜ್ಞತೆಯ ಸ್ಮರಣೆಗಾಗಿ ಬಿಜೆಪಿ ಸೇವಾ ಸಂಕಲ್ಪ ಅಭಿಯಾನದಡಿ ಜಿಲ್ಲೆಯಲ್ಲೂ ೧೩ ಬಗೆಯ ಕಾರ್ಯಕ್ರಮಗಳನ್ನು ಸಂಯೋಜಿಸಿದೆ ಎಂದರು.

ಪ್ರಧಾನಿ ಮೋದಿಯವರ ಜನ್ಮದಿನವಾದ ಸೆ. ೧೭ರಂದು ಸೇವಾ ದಿವಸ್ ಆಚರಿಸಲಾಗುತ್ತಿದ್ದು, ಜಿಲ್ಲೆಯ ಮಂದಿರಗಳಲ್ಲಿ ಪೂಜೆ, ಪ್ರತಿಯೊಂದು ಬೂತ್ ಮಟ್ಟದಲ್ಲಿ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಆಶೀರ್ವಾದ್ ಕೆ ದಿಯೇ(ಆಶೀರ್ವಾದದ ದೀಪ) ಕಾರ್ಯಕ್ರಮದ ಅಡಿಯಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಅದರಂತೆ ಆಯ್ದ ದಿನಗಳಲ್ಲಿ ಸ್ವಚ್ಛತಾ ಅಭಿಯಾನ, ಅಂಗನವಾಡಿ ಉತ್ಸವ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ನನ್ನ ಕನಸಿನ ಭಾರತ ಕುರಿತು ಚಿತ್ರಕಲಾ ಸ್ಪರ್ಧೆ, ಸೇವಾಕಥೆ, ಸೇವಾ ಜ್ಯೋತಿ ಕಲಶ ಯಾತ್ರೆ ಮುಂತಾದವನ್ನು ಹಮ್ಮಿಕೊಳ್ಳಲಾಗಿದೆ.

ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಜಿ ಶಾಸಕರು, ಪದಾಧಿಕಾರಿಗಳು, ಮೋರ್ಚಾಗಳ ನಾಯಕರು ಮತ್ತು ಕಾರ್ಯಕರ್ತರು ಜನಸಾಮಾನ್ಯರನ್ನು, ಯೋಜನೆಯ ಫಲಾನುಭವಿಗಳನ್ನು ಜೊತೆಯಾಗಿಸಿಕೊಂಡು ಯಶಸ್ವಿಗೊಳಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ತಿಳಿಸಿದರು.

ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಅಧೀನದಲ್ಲಿರುವ ಯಾವುದೇ ಸ್ಥಳೀಯ ನಿಕಾಯ, ಸಂಸ್ಥೆಗ ಸೇರಿದ ಹಕ್ಕುಪತ್ರ ಅಥವಾ ದಾಖಲೆ ಹೊಂದಿರದ ಆಸ್ತಿಗಳಿಗೆ ತೆರಿಗೆಯಿಂದ ಹೊರಗಿಡುವಂತೆ ಸರ್ಕಾರದ ಸುತ್ತೋಲೆಯನ್ನು ಮರಳಿ ಪಡೆಯಬೇಕು. ಇದರ ವಿರುದ್ಧ ಸೆ. ೨೧ರಿಂದ ೨೫ರ ವರೆಗೆ ಜಿಲ್ಲೆಯ ಪ್ರತಿ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಎದುರು ಜನಾಂದೋಲನ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ವಂದೇ ಮಾತರಂ ಗೀತೆಯ ಮೊದಲ ಎರಡು ಚರಣ ಮಾತ್ರ ಹಾಡುವಂತೆ ಹೊರಡಿಸಿದ ಆದೇಶ ಹಿಂಪಡೆದು ಪೂರ್ಣಪಾಠದ ಗಾಯನಕ್ಕೆ ಆದೇಶವಾಗಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಸ್ವರೂಪವಾಗಲಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅತಿಕ್ರಮಣದಾರರು, ಅರಣ್ಯ ನಿವಾಸಿಗಳು, ಸರಿಯಾದ ಭೂ, ಕಟ್ಟಡ ದಾಖಲೆ ಹೊಂದಿಲ್ಲದವರು ಮುಂತಾದವರಿಗೆ ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಆಕರಣೆ ತಡೆದಿರುವುದರ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ತಂಡದ ಚುನಾವಣಾ ಗಿಮಿಕ್ ಇದೆ. ಈಗ ಜನರಲ್ಲಿ ಭಯ ಮೂಡಿಸಿ, ಚುನಾವಣಾ ಕಾಲಕ್ಕೆ ಆದೇಶ ಹಿಂಪಡೆದು ಮತದಾರರ ಒಲವು ಗಳಿಸುವ ಉದ್ದೇಶವಷ್ಟೇ ಹೊರತು ಬೇರೇನಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಪದಾಧಿಕಾರಿಗಳಾದ ತಿಮ್ಮಪ್ಪ ಮುಕ್ರಿ, ರಾಮಚಂದ್ರ ಪಟಗಾರ, ವಿಶ್ವನಾಥ ನಾಯ್ಕ ಇತರರು ಇದ್ದರು.